ದ. ಆಫ್ರಿಕದ ರೂಪಾಂತರಿತ ವೈರಸ್ ಮೇಲೆ ಲಸಿಕೆ ಪರಿಣಾಮ ಬೀರದು: ಬ್ರಿಟನ್ ವಿಜ್ಞಾನಿಗಳ ಅಭಿಪ್ರಾಯ

ಲಂಡನ್, ಜ. 4: ದಕ್ಷಿಣ ಆಫ್ರಿಕದಲ್ಲಿ ಪತ್ತೆಯಾಗಿರುವ ರೂಪಾಂತರಿತ ಕೊರೋನ ವೈರಸ್ ವಿರುದ್ಧ ಈಗ ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿಯಾಗುವ ಬಗ್ಗೆ ವಿಜ್ಞಾನಿಗಳು ಖಚಿತ ವಿಶ್ವಾಸ ಹೊಂದಿಲ್ಲ ಎಂದು ಬ್ರಿಟಿಶ್ ಟೆಲಿವಿಶನ್ ಜಾಲ ಐಟಿವಿಯ ರಾಜಕೀಯ ಸಂಪಾದಕ ರಾಬರ್ಟ್ ಪೆಸ್ಟನ್ ಸೋಮವಾರ ಹೇಳಿದ್ದಾರೆ.
ಇದಕ್ಕೂ ಮೊದಲು, ಕೊರೋನ ವೈರಸ್‌ನ ಹೊಸ ಪ್ರಭೇದದ ಬಗ್ಗೆ ನಾನು ‘ಅತ್ಯಂತ ಚಿಂತಿತನಾಗಿದ್ದೇನೆ’ ಎಂದು ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಹೇಳಿದ್ದರು.
‘‘ದಕ್ಷಿಣ ಆಫ್ರಿಕದ ಕೋವಿಡ್-19 ಪ್ರಭೇದದ ಬಗ್ಗೆ ಮ್ಯಾಟ್ ಹ್ಯಾನ್‌ಕಾಕ್ ‘ಅತ್ಯಂತ ಚಿಂತಿತರಾಗಲು’ ಕಾರಣ ಏನೆನ್ನುವುದನ್ನು ಸರಕಾರದ ವೈಜ್ಞಾನಿಕ ಸಲಹೆಗಾರರೋರ್ವರು ಬಹಿರಂಗಪಡಿಸಿದ್ದಾರೆ. ಈಗ ಲಭ್ಯವಿರುವ ಲಸಿಕೆಗಳು ಕೊರೋನ ವೈರಸ್‌ನ ಬ್ರಿಟನ್ ಪ್ರಭೇದದ ಮೇಲೆ ಬೀರುವಷ್ಟೇ ಪರಿಣಾಮವನ್ನು ದಕ್ಷಿಣ ಆಫ್ರಿಕದ ಪ್ರಭೇದದ ಮೇಲೂ ಬೀರುತ್ತವೆ ಎನ್ನುವ ಸಂಪೂರ್ಣ ವಿಶ್ವಾಸ ವಿಜ್ಞಾನಿಗಳಿಗಿಲ್ಲ’’ ಎಂದು ರಾಬರ್ಟ್ ಪೆಸ್ಟನ್ ಹೇಳಿದ್ದಾರೆ.
ವಾರಗಳ ಹಿಂದೆ ಕೊರೋನ ವೈರಸ್‌ನ ರೂಪಾಂತರಿತ ಪ್ರಭೇದ ಬ್ರಿಟನ್‌ನಲ್ಲಿ ಪತ್ತೆಯಾದ ಸಮಯದಲ್ಲೇ ದಕ್ಷಿಣ ಆಫ್ರಿಕದಲ್ಲೂ ಇನ್ನೊಂದು ರೂಪಾಂತರಿತ ಪ್ರಭೇದ ಪತ್ತೆಯಾಗಿತ್ತು.





