''ಬಗರ್ ಹುಕುಂ ಸಾಗುವಳಿದಾರರು ಮನೆ ಕಳೆದುಕೊಂಡು ಜೈಲಿಗೆ ಹೋಗಬೇಕಾದ ಪರಿಸ್ಥಿತಿ''
ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘ

ಶಿವಮೊಗ್ಗ, ಜ.04: ಯಡಿಯೂರಪ್ಪನವರು 2010ರಲ್ಲಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ವಿಶೇಷ ಹಕ್ಕುಗಳ ಭೂಮಿಗಳನ್ನು ಅರಣ್ಯ ಭೂಮಿ ಎಂದು ಸುತ್ತೋಲೆ ಹೊರಡಿಸಿರುವುದರಿಂದ ಬಗರ್ ಹುಕುಂ ಸಾಗುವಳಿದಾರರು ಮನೆ ಮಠ ಕಳೆದುಕೊಂಡು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ಆರೋಪಿಸಿದೆ.
ಯಡಿಯೂರಪ್ಪ ನೇತೃತ್ವದ ಸರ್ಕಾರ 11-02-2010 ಹಾಗೂ 03-05-2010 ರಲ್ಲಿ ಎರಡು ಬಾರಿ ಸುತ್ತೋಲೆ ಹೊರಡಿಸಿ ಸರ್ಕಾರದ ವಿಶೇಷ ಹಕ್ಕುಳ್ಳ ಭೂಮಿಗಳಾದ ಸೊಪ್ಪಿನಬೆಟ್ಟ, ಕಾನು, ಕುಮ್ಕಿ, ಬೆಟ್ಟ, ಜಮ ಬಾಣೆ ಹಾಗೂ ಇನ್ನಿತರ ಭೂಮಿಗಳನ್ನು ಅರಣ್ಯ ಭೂಮಿ ಎಂದು ಹಾಗೂ ಈ ಎಲ್ಲಾ ಭೂಮಿಗಳನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ಮಂಜೂರು ಮಾಡಬಾರದು ಎಂದು ಆದೇಶ ಹೊರಡಿಸಿದೆ. ಇದು ಮಲೆನಾಡಿನ ರೈತರಿಗೆ ಮಾರಕವಾಗಿದೆ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೆಗಡೆ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಇನ್ನಿತರ ಮಲೆನಾಡಿನ ಜಿಲ್ಲೆಗಳಲ್ಲಿ ಬಡ ರೈತರು ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಅರ್ಜಿಗಳೆಲ್ಲ ಈಗ ತಿರಸ್ಕಾರಗೊಂಡಿವೆ. ಅಷ್ಟೇ ಅಲ್ಲದೇ, ಕರ್ನಾಟಕ ಭೂ ಕಬಳಿಕೆ ವಿಶೇಷ ಕಾಯ್ದೆ 2011ರ ಅಡಿಯಲ್ಲಿ ಭೂಗಳ್ಳರು ಎಂಬ ಅಣೆಪಟ್ಟ ಕಟ್ಟಿಕೊಂಡು ಭುಮಿ ಹಾಗೂ ಮನೆ ಮಾಲಕತ್ವ ಕಳೆದುಕೊಂಡು ಜೈಲು ಮತ್ತು ದಂಡದ ಶಿಕ್ಷೆಯನ್ನು ಅನುಭವಿಸುವುದು ಅನಿವಾರ್ಯವಾಗಿದೆ ಎಂದರು.
ಬಿ.ಎಸ್.ಯಡಿಯೂರಪ್ಪನವರು 4ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಪಾದಯಾತ್ರೆ ಮಾಡಿ ತಾವೊಬ್ಬ ರೈತ ಹುಟ್ಟು ಹೋರಾಟಗಾರರೆಂದು ಪ್ರತಿಬಿಂಬಿಸಿಕೊಂಡಿದ್ದಾರೆ. ಇಂತಹವರು ಈಗ ಈ ಕಾನೂನನ್ನು ಜಾರಿಗೆ ತಂದು ರೈತರಿಗೆ ಮರಣ ಶಾಸನ ತಂದಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಉಳುವವನೇ ಭೂಮಿ ಒಡೆಯ ಎಂದು ಕಾನೂನು ತಂದರೆ, ಬಿಜೆಪಿ ಸರ್ಕಾರ ಉಳ್ಳವನೇ ಭೂಮಿ ಒಡೆಯ ಎಂಬ ಕಾನೂನು ತಂದಿದೆ. ಕಾಂಗ್ರೆಸ್ ಸರ್ಕಾರ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಬಡವರಿಗೆ ಸಾಗುವಳಿ ಹಕ್ಕು ನೀಡಲು ಅನುಕೂಲವಾಗುವಂತೆ ನಮೂನೆ-53ರಲ್ಲಿ ಸಲ್ಲಿಸಲು ಅವಕಾಶ ನೀಡಿತ್ತು. ಆದರೆ ಈಗ ಕಾಯ್ದೆ ತಿದ್ದುಪಡಿಯಿಂದ ಜಿಲ್ಲೆಯಲ್ಲಿ ಸುಮಾರು 26,942 ಬಗರ್ ಹುಕುಂ ಸಾಗುವಳಿದಾರರು 83,566 ಎಕರೆ ಸಾಗುವಳಿ ಭೂಮಿಯನ್ನು ಸಕ್ರಮ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ತಿದ್ದುಪಡಿ ಕಾನೂನಿನಿಂದ ಇವರೆಲ್ಲರೂ ಈಗ ಭೂಮಿ ಹಕ್ಕನ್ನು ಕಳೆದುಕೊಂಡು ಆತ್ಮಹತ್ಯೆಯ ದಾರಿ ತುಳಿದರೆ ಆಶ್ಚರ್ಯವೇನೂ ಇಲ್ಲ ಎಂದರು.
ಬಿಜೆಪಿ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ನಿಜವಾಗಿಯೂ ರೈತರ ಬಗ್ಗೆ, ಬಗರ್ಹುಕುಂ ಸಾಗುವಳಿದಾರರ ಬಗ್ಗೆ ಕಳಕಳಿ ಇದ್ದರೆ ಸೂಕ್ತ ತಿದ್ದುಪಡಿಯನ್ನು ತಂದು ಹೊಸ ಸುತ್ತೋಲೆ ಹೊರಡಿಸಬೇಕು. ಭೂ ಸಾಗುವಳಿಗಾರರಿಗೆ ಅನುಕೂಲವಾಗುವಂತೆ ವಿಶೇಷ ತಿದ್ದುಪಡಿ ಮಾಡಬೇಕು. ಇಲ್ಲದಿದ್ದರೆ ಅಡಿಕೆ ಬೆಳೆಗಾರರ ಸಂಘ ಫೆಬ್ರವರಿ ತಿಂಗಳಿನಿಂದ ಜಿಲ್ಲೆಯಲ್ಲಿ ಈ ಮರಣ ಶಾಸನದ ವಿರುದ್ಧ ಮತ್ತೊಂದು ಚಳವಳಿಯನ್ನು ಆರಂಭಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದಯಾನಂದ್, ಗಣೇಶ್ ಗಾಜನೂರು, ಕೆ. ಚೇತನ್, ನಿರಂಜನ್ ಇದ್ದರು.







