ರೂಪಾಂತರಿ ಕೊರೋನ ವೈರಸ್ ಸೋಂಕು: ದೇಶದಲ್ಲಿ ಒಟ್ಟು 38 ಪಾಸಿಟಿವ್ ಪ್ರಕರಣ

ಹೊಸದಿಲ್ಲಿ, ಜ. 4: ದೇಶದಲ್ಲಿ ಇದುವರೆಗೆ 38 ಮಂದಿಯಲ್ಲಿ ರೂಪಾಂತರಿ ಕೊರೋನ ವೈರಸ್ ಸೋಂಕು ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಇವರೆಲ್ಲರನ್ನು ಸಂಬಂಧಿತ ರಾಜ್ಯ ಸರಕಾರಗಳ ನಿಯೋಜಿತ ಆರೋಗ್ಯ ಕೇಂದ್ರಗಳಲ್ಲಿ ಏಕ ಕೊಠಡಿಯ ಐಸೋಲೇಷನ್‌ನಲ್ಲಿ ಇರಿಸಲಾಗಿದೆ.
ಅವರ ನಿಕಟ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ರೂಪಾಂತರಿ ಕೊರೋನ ಸೋಂಕಿನ 38 ಮಾದರಿಗಳಲ್ಲಿ ಹೊಸದಿಲ್ಲಿಯ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ನಲ್ಲಿ 8, ದಿಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ಜೆನೋಮಿಕ್ ಆ್ಯಂಡ್ ಇಂಟಗ್ರೇಟಿವ್ ಬಯಾಲಜಿ (ಐಜಿಐಬಿ)ಯಲ್ಲಿ 11, ಕಲ್ಯಾಣಿ (ಕೋಲ್ಕತ್ತಾ)ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೆನೋಮಿಕ್ಸ್ (ಎನ್‌ಐಬಿಎಂಜಿ)ನಲ್ಲಿ 1, ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ 5, ಹೈದರಾಬಾದ್‌ನ ಸೆಂಟರ್ ಫಾರ್ ಸೆಲ್ಯುಲಾರ್ ಆ್ಯಂಡ್ ಮೋಲೆಕ್ಯುಲರ್ ಬಯಾಲಜಿ (ಸಿಸಿಎಂಬಿ)ಯಲ್ಲಿ 3, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆ್ಯಂಡ್ ನ್ಯೂರೊ ಸಯನ್ಸ್ ಆಸ್ಪತ್ರೆಯಲ್ಲಿ 10 ಮಾದರಿಗಳಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರಿನ ಎನ್‌ಸಿಬಿಎಸ್, ಇನ್‌ಸ್ಟೆಮ್, ಹೈದರಾಬಾದ್‌ನ ಸಿಡಿಎಫ್‌ಡಿ, ಭುವನೇಶ್ವರದ ಐಎಲ್‌ಎಸ್, ಪುಣೆಯ ಎನ್‌ಸಿಸಿಎಸ್‌ನಲ್ಲಿನ ಮಾದರಿಗಳಲ್ಲಿ ರೂಪಾಂತರಿತ ಕೊರೋನ ಸೋಂಕು ಪತ್ತೆಯಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.





