‘ಮಿಷನ್ ಅಂತ್ಯೋದಯ’ ಸಮೀಕ್ಷೆ: ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಗದಗದ ಹುಲಕೋಟಿ ಗ್ರಾಮ

ಬೆಂಗಳೂರು, ಜ.5: ಗ್ರಾಮೀಣ ಪ್ರದೇಶದಲ್ಲಿ ಜನಜೀವನ ಮಟ್ಟದ ಕುರಿತು ನಡೆಸಿದ ‘ಮಿಷನ್ ಅಂತ್ಯೋದಯ’ ರಾಷ್ಟ್ರಮಟ್ಟದ ಸಮೀಕ್ಷೆಯಲ್ಲಿ ಗದಗ ಜಿಲ್ಲೆಯ ಹುಲಕೋಟಿ ಗ್ರಾಮ ಪ್ರಥಮ ಸ್ಥಾನ ಪಡೆದಿದೆ. ಬೆಳಗಾವಿ ಜಿಲ್ಲೆಯ ನಂದಗಡ ಮತ್ತು ಕುಲಗೋಡ್ ಗ್ರಾಮ ಪಂಚಾಯತ್‌ಗಳೂ ಅಗ್ರ 10ರ ಪಟ್ಟಿಯಲ್ಲಿದೆ ಎಂದು ವರದಿ ತಿಳಿಸಿದೆ.
2020ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ದೇಶದಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಜನಜೀವನ ಮಟ್ಟದ ಕುರಿತು ಕೇಂದ್ರ ಸರಕಾರ ನಡೆಸಿದ ಸಮೀಕ್ಷೆ ಇದಾಗಿದೆ. ಅಂತ್ಯೋದಯ ಸಮೀಕ್ಷೆಯಲ್ಲಿ ಗ್ರಾಮೀಣಾಭಿವೃದ್ಧಿಯ ಬಗ್ಗೆ ಕೇಳಲಾಗುವ 141 ಪ್ರಶ್ನೆಗಳಿಗೆ ಗ್ರಾಮಪಂಚಾಯತ್ ಸಿಬ್ಬಂದಿ ಸೂಕ್ತ ಮಾಹಿತಿಯೊಂದಿಗೆ ಉತ್ತರಿಸಬೇಕು. ಕುಡಿಯಲು ಶುದ್ಧನೀರು ಪೂರೈಕೆ, ಉತ್ತಮ್ಮ ರಸ್ತೆ, ಉತ್ತಮ ಚರಂಡಿ ವ್ಯವಸ್ಥೆ, 82 ಶೇ. ದಷ್ಟು ಸಾಕ್ಷರತಾ ಪ್ರಮಾಣ ಇರುವ ಹುಲ್ಕೋಟಿ ಗ್ರಾಮ 90 ಶೇ. ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದೆ. ಗ್ರಾಮದಲ್ಲಿ 2,733 ಕುಟುಂಬಗಳಿದ್ದು ಪ್ರತೀ ಕುಟುಂಬಕ್ಕೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿದೆ. ಗ್ರಾಮದಲ್ಲಿ 42 ಕಿ.ಮೀ ಭೂಗತ ಚರಂಡಿ ವ್ಯವಸ್ಥೆಯಿದೆ. ಎಲ್ಲಾ ರಸ್ತೆಗಳನ್ನೂ ಡಾಮರೀಕರಣಗೊಳಿಸಿದ್ದು ಮುಖ್ಯ ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸಲಾಗಿದೆ. ಗ್ರಾಮದಲ್ಲಿ ಪ್ರತೀ ದಿನ ತ್ಯಾಜ್ಯ ಸಂಗ್ರಹ ನಡೆಯುತ್ತಿದೆ. ಎಂನರೇಗಾ ಯೋಜನೆಯಡಿ ಗ್ರಾಮಸ್ಥರಿಗೆ ಸಾಕಷ್ಟು ಉದ್ಯೋಗಾವಕಾಶ ಒದಗಿಸಲಾಗಿದೆ. ಗ್ರಾಮ ಹಾಗೂ ಸುತ್ತಮುತ್ತಲಿನ ಊರಿನ ಖಾಸಗಿ ಕೃಷಿ ಕ್ಷೇತ್ರದಲ್ಲೂ ಉದ್ಯೋಗಾವಕಾಶ ಒದಗಿಸಲಾಗಿದೆ.
ಹುಲಕೋಟಿ ಗ್ರಾಮಕ್ಕೆ ದೊರೆತ ಪುರಸ್ಕಾರದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಗದಗ ಶಾಸಕ ಎಚ್.ಕೆ. ಪಾಟೀಲ್, ರಾಜ್ಯದಲ್ಲಿ ಸಹಕಾರ ಚಳವಳಿ ಆರಂಭಿಸಿದ ತಮ್ಮ ತಂದೆ ಕೆಎಚ್ ಪಾಟೀಲ್ ಅಂದು ಕಂಡಿದ್ದ ಕನಸು ಇಂದು ನನಸಾಗಿದೆ. ಈ ಪ್ರದೇಶದಲ್ಲೇ ಮಾದರಿ ಗ್ರಾಮವಾಗಿರುವ ಹುಲ್ಕೋಟಿ 2 ವರ್ಷದ ಹಿಂದೆ 5ನೇ ಸ್ಥಾನ ಪಡೆದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.





