ಟ್ರಂಪ್ ವಿರುದ್ಧ ಇರಾನ್‌ನಿಂದ ಇಂಟರ್‌ಪೋಲ್ ನೋಟಿಸ್

ಟೆಹರಾನ್ (ಇರಾನ್), ಜ. 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕಾಗಿ ಇರಾನ್ ಅವರ ವಿರುದ್ಧ ಇಂಟರ್‌ಪೋಲ್ ಮೂಲಕ ‘ಕೆಂಪು ನೋಟಿಸ್’ ಜಾರಿಗೊಳಿಸಿದೆ.
ಕಳೆದ ವರ್ಷದ ಜನವರಿಯಲ್ಲಿ ನಡೆದ ಇರಾನ್ ಸೇನಾಧಿಕಾರಿ ಜನರಲ್ ಖಾಸಿಮ್ ಸುಲೈಮಾನಿಯ ಹತ್ಯೆಯಲ್ಲಿ ವಹಿಸಿರುವ ಪಾತ್ರಗಳಿಗಾಗಿ ಟ್ರಂಪ್ ಮತ್ತು ಅಮೆರಿಕದ ಇತರ 47 ಅಧಿಕಾರಿಗಳನ್ನು ಬಂಧಿಸುವಂತೆ ಅಂತರ್‌ರಾಷ್ಟ್ರೀಯ ಪೊಲೀಸ್ ಸಂಘಟನೆ (ಇಂಟರ್‌ಪೋಲ್)ಗೆ ಇರಾನ್ ಮನವಿ ಮಾಡಿದೆ ಎಂದು ಇರಾನ್ ನ್ಯಾಯಾಂಗ ಇಲಾಖೆಯ ವಕ್ತಾರ ಗೋಲಮ್‌ಹುಸೈನ್ ಇಸ್ಮಾಯಿಲ್ ಮಂಗಳವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಘೋಷಿಸಿದರು.
‘‘ಸೇನಾಧಿಕಾರಿಯ ಹತ್ಯೆಗೆ ಆದೇಶ ನೀಡಿದವರು ಮತ್ತು ಅದನ್ನು ಜಾರಿಗೊಳಿಸಿದವರನ್ನು ಬೆಂಬತ್ತಿ ಶಿಕ್ಷಿಸುವ ನಿಟ್ಟಿನಲ್ಲಿ ಇರಾನ್ ಗಂಭೀರವಾಗಿ ಕಾರ್ಯಪ್ರವೃತ್ತವಾಗಿದೆ’’ ಎಂದು ಅವರು ಹೇಳಿದರು.
ಇರಾನ್‌ನ ಉನ್ನತ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್‌ನ ವಿದೇಶಿ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದ ಸುಲೈಮಾನಿ 2020 ಜನವರಿ 3ರಂದು ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಹತರಾಗಿದ್ದಾರೆ. ಇರಾಕ್ ರಾಜಧಾನಿ ಬಗ್ದಾದ್‌ನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುತ್ತಿದ್ದ ಸುಲೈಮಾನಿಯ ವಾಹನಗಳ ಸಾಲಿನ ಮೇಲೆ ಅಮೆರಿಕದ ಡ್ರೋನ್ ಬಾಂಬ್‌ಗಳನ್ನು ಹಾಕಿತ್ತು.
ದಾಳಿಯಲ್ಲಿ ಸುಲೈಮಾನಿ, ಇರಾಕ್‌ನ ಖಾಸಗಿ ಪಡೆಯೊಂದರ ನಾಯಕ ಹಾಗೂ ಇತರ 10 ಮಂದಿ ಮೃತಪಟ್ಟಿದ್ದಾರೆ.







