ಸರಕಾರ ಜನರ ಜೀವದ ಜೊತೆ ಆಟವಾಡುವುದು ಬೇಡ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜ.5: ಕೊರೋನ ಲಸಿಕೆ ವಿಚಾರದಲ್ಲಿ ಸರಕಾರ ವೈಜ್ಞಾನಿಕ ಕ್ರಮ ಅನುಸರಿಸಬೇಕು. ದೇಶದಲ್ಲಿ ತಜ್ಞರು, ವಿಜ್ಞಾನಿಗಳು ಇದ್ದಾರೆ. ಪ್ರಯೋಗಗಳು ಎಲ್ಲ ಪ್ರಕಾರದ ಮಾನದಂಡಗಳ ಮೂಲಕ ನಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ರಾಜ್ಯಗಳಲ್ಲಿ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕೊರೋನ ಲಸಿಕೆ ವಿಚಾರದಲ್ಲಿ ಆತುರದ ನಿರ್ಧಾರಕ್ಕೆ ಬರುತ್ತಿದೆ. ಇದು ಅಪಾಯಕಾರಿಯಾಗಿದ್ದು, ಜನರ ಜೀವದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದರು.
ಕಲಬುರ್ಗಿ ಜೈಲಿನಲ್ಲಿ ಮೂರು ವರ್ಷದ ಮಗುವಿನ ಸಾವಿನ ಪ್ರಕರಣ ಗಂಭೀರವಾಗಿದ್ದು, ನಾವು ಈ ಘಟನೆಯನ್ನು ಖಂಡಿಸುತ್ತೇವೆ. ಇದಕ್ಕೆ ಕಾರಣರಾಗಿರುವ ಪೊಲೀಸ್ ಅಧಿಕಾರಿಯನ್ನು ಬಂಧಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.
Next Story





