ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಸಿಂಗ್ ಠಾಕೂರ್‌ಗೆ ನ್ಯಾಯಾಲಯದ ಹಾಜರಾತಿಯಿಂದ ವಿನಾಯತಿ

ಮುಂಬೈ, ಜ. 5: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ಗೆ ನಿಯಮಿತ ಹಾಜರಾತಿಯಿಂದ ಮುಂಬೈಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ನ್ಯಾಯಾಲಯ ಮಂಗಳವಾರ ವಿನಾಯತಿ ನೀಡಿದೆ.
ಎನ್‌ಐಎ ತನಿಖೆ ನಡೆಸುತ್ತಿರುವ ಈ ಪ್ರಕರಣದ ಆರೋಪಿಗಳಲ್ಲಿ ಓರ್ವರಾಗಿರುವ ಪ್ರಜ್ಞಾ ಸಿಂಗ್ ಠಾಕೂರ್ ಸೋಮವಾರ ನ್ಯಾಯಾಲಯದ ಮುಂದೆ ಹಾಜರಾದರು. ಆರೋಗ್ಯ ಹಾಗೂ ಭದ್ರತೆಯ ಆತಂಕದ ಕಾರಣದಿಂದ ನಿಯಮಿತವಾಗಿ ಪ್ರಯಾಣ ನಡೆಸುವುದು ಕಷ್ಟಕರ ಎಂದು ಉಲ್ಲೇಖಿಸಿ ಠಾಕೂರ್ ಅವರ ವಕೀಲ ಜೆ.ಪಿ. ಮಿಶ್ರಾ ಲಿಖಿತ ಮನವಿ ಸಲ್ಲಿಸಿದ ಬಳಿಕ ವಿಶೇಷ ನ್ಯಾಯಮೂರ್ತಿ ಪಿ.ಆರ್. ಸಿತ್ರೆ ಮಂಗಳವಾರ ಠಾಕೂರ್‌ಗೆ ಈ ವಿನಾಯತಿ ನೀಡಿದ್ದಾರೆ.
‘‘ಠಾಕೂರ್‌ಗೆ ಹಲವು ಕಾಯಿಲೆಗಳಿವೆ. ಅವರು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಿನ್ನೆ ಕೂಡ ಅವರು ಮುಂಬೈಯ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಕೆಲವು ಪರೀಕ್ಷೆಗೆ ಒಳಗಾಗಿದ್ದರು. ಅವರ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಇವೆ ಹಾಗೂ ಅದಕ್ಕೆ ವೈದ್ಯರ ತಂಡವೊಂದರಿಂದ ಚಿಕಿತ್ಸೆಯ ಅಗತ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ’’ ಎಂದು ವಕೀಲರು ಮನವಿಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಭೋಪಾಲದ ಸಂಸದೆಯಾಗಿರುವ ಠಾಕೂರ್ ಅವರ ಜೀವಕ್ಕೆ ಬೆದರಿಕೆ ಇದೆ. ಆದುದರಿಂದ ಮಧ್ಯಪ್ರದೇಶ ಪೊಲೀಸರು ಅವರಿಗೆ 6 ಮಂದಿ ಶಸ್ತ್ರಾಸ್ತ್ರ ಸಿಬ್ಬಂದಿಯ ಭದ್ರತೆ ಒದಗಿಸಿದ್ದಾರೆ ಎಂದು ಮಿಶ್ರಾ ಮನವಿಯಲ್ಲಿ ತಿಳಿಸಿದ್ದಾರೆ.







