ಶಿವಮೊಗ್ಗ ; ಮಕ್ಕಳಿಬ್ಬರ ಅನುಮಾನಾಸ್ಪದ ಸಾವು : ದೂರು

ಸಾಂದರ್ಭಿಕ ಚಿತ್ರ
ಶಿವಮೊಗ್ಗ : ತಾಯಿಯೊಂದಿಗೆ ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೂ ಪಾರ್ಕ್ ನಲ್ಲಿ ಆಟವಾಡಿದ ಬಳಿಕ ಅಸ್ವಸ್ಥಗೊಂಡ ಇಬ್ಬರು ಮಕ್ಕಳು ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮಕ್ಕಳ ತಾಯಿ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭದ್ರಾವತಿ ಸುರಗಿತೋಪು ಬಡಾವಣೆಯ ನಿವಾಸಿ ಗೀತಾ ಎಂಬವರ ಮಕ್ಕಳಾದ ಅಶ್ವಿನ್ (8) ಹಾಗೂ ಆಕಾಂಕ್ಷ (5) ಅವರನ್ನು ಶಿವಮೊಗ್ಗ ನಗರದ ಗಾಂಧಿ ಪಾರ್ಕ್ ಗೆ ಕರೆದುಕೊಂಡು ಹೋಗಿದ್ದು, ಮಕ್ಕಳು ಮಧ್ಯಾಹ್ನದವರೆಗೂ ಗಾಂಧಿಪಾರ್ಕ್ ನಲ್ಲಿ ಆಟವಾಡಿದ್ದಾರೆ ಎಂದು ತಿಳಿದುಬಂದಿದ್ದು, ನಂತರ ಸಮೀಪದ ಅಂಗಡಿಯೊಂದರಲ್ಲಿ ಜ್ಯೂಸ್ ಕುಡಿದಿದ್ದಾರೆ. ಸಂಜೆ 4 ಗಂಟೆಗೆ ಪಾರ್ಕ್ ನಿಂದ ಬಸ್ ನಿಲ್ದಾಣಕ್ಕೆ ತೆರಳುವ ವೇಳೆಗೆ ಮಕ್ಕಳು ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಖಾಸಗಿ ಕ್ಲಿನಿಕ್ ವೊಂದಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಕ್ಕಳು ಸೋಮವಾರ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ದೂರಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





