ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಇಲ್ಲ: ರೈತರ ಪ್ರತಿಭಟನೆಯ ಕುರಿತು ಸುಪ್ರೀಂಕೋರ್ಟ್ ಬೇಸರ

ಹೊಸದಿಲ್ಲಿ: ನೂತನ ಕೃಷಿ ಕಾನೂನುಗಳ ಕುರಿತು ಗೊಂದಲ ಮುಂದುವರಿದಿದ್ದು, ದಿಲ್ಲಿಯ ಗಡಿಭಾಗಗಳಲ್ಲಿ ರೈತರ ಪ್ರತಿಭಟನೆಯು ತೀವ್ರಗೊಂಡಿದೆ. ಈ ಕುರಿತು ಬೇಸರ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ‘ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಇಲ್ಲ’ ಎಂದು ಹೇಳಿದೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ಸರಕಾರ ಹಾಗೂ ಪ್ರತಿಭಟನಾನಿರತ ರೈತರ ನಡುವೆ ಮಾತುಕತೆಗೆ ಉತ್ತೇಜಿಸುವುದು ಸರ್ವೋಚ್ಚ ನ್ಯಾಯಾಲಯದ ಉದ್ದೇಶ. ಆದರೆ ಪರಿಸ್ಥಿತಿಯಲ್ಲಿ ಏನೂ ಸುಧಾರಣೆ ಕಾಣುತ್ತಿಲ್ಲ ಎಂದು ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ.
ರೈತರ ಪ್ರತಿನಿಧಿಗಳು ಹಾಗೂ ಕೇಂದ್ರ ಸರಕಾರದ ಮಧ್ಯೆ ಏಳನೇ ಸುತ್ತಿನ ಮಾತುಕತೆ ವಿಫಲವಾದ ಎರಡು ದಿನಗಳ ಬಳಿಕ ನ್ಯಾಯಾಲಯಕ್ಕೆ ತಿಳಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, “ನಾವು ರೈತರೊಂದಿಗೆ ಚರ್ಚಿಸುತ್ತಿದ್ದೇವೆ. ಎರಡೂ ಕಡೆಗಳ ನಡುವೆ ಒಂದು ರೀತಿಯ ತಿಳುವಳಿಕೆಯ ಸಾಧ್ಯತೆಗಳಿವೆ’’ಎಂದು ಹೇಳಿದ್ದಾರೆ.
ಈಗ ರೈತರು-ಕೇಂದ್ರ ಸರಕಾರದ ನಡುವೆ ಆರೋಗ್ಯಕರ ಚರ್ಚೆ ನಡೆಯುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.
ನಿಮಗೆ ಪ್ರತಿಭಟಿಸುವ ಹಕ್ಕಿದೆ ಎಂದು ನಾವು ನಿಮಗೆ ಹೇಳುತ್ತಿದ್ದೇವೆ. ನಾವು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ನೀವು ಪ್ರತಿಭಟನೆ ಮುಂದುವರಿಸಿರಿ. ನಿಮ್ಮ ಪ್ರತಿಭಟನೆಗೆ ಒಂದು ಉದ್ದೇಶವಿದೆ. ಅದನ್ನು ಯಾರಾದೊಬ್ಬರೊಂದಿಗೆ ಮಾತನಾಡುವ ಮೂಲಕ ಆ ಉದ್ದೇಶವನ್ನು ಈಡೇರಿಸಿಕೊಳ್ಳಬೇಕು. ನೀವು ವರ್ಷಗಳ ಕಾಲ ಪ್ರತಿಭಟನೆ ನಡಸುತ್ತಿರಲು ಸಾಧ್ಯವಿಲ್ಲ ಎಂದು ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಹೇಳಿದ ನ್ಯಾಯಾಲಯವು ಸೋಮವಾರ ಮತ್ತೆ ಈ ವಿಷಯವನ್ನು ಆಲಿಸುವುದಾಗಿ ತಿಳಿಸಿದೆ.







