ದೇವಸ್ಥಾನದಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ: ಇಬ್ಬರ ಸೆರೆ, ಅರ್ಚಕ ಪರಾರಿ
ಕುಟುಂಬವನ್ನು ಭೇಟಿಯಾಗಲಿರುವ ಮಹಿಳಾ ಆಯೋಗ

ಬುಡೌನ್,ಜ.06: ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಅರ್ಚಕ ಮಾತ್ರ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ನಡುವೆ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿರುವ ಆಯೋಗದ ಅಧ್ಯಕ್ಷೆ ರೇಖಾ ಶರ್ಮ, ಆಯೋಗದ ಸದಸ್ಯೆಯೊಬ್ಬರು ಸದ್ಯದಲ್ಲಿಯೇ ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಗೂ ಪೊಲೀಸರ ಜತೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯಾಗಿರುವ ಸಂತ್ರಸ್ತೆಯ ಮೇಲೆ ಒಬ್ಬ ಅರ್ಚಕ ಮತ್ತು ಆತನ ಇಬ್ಬರು ಸಹವರ್ತಿಗಳು ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಅರ್ಚಕ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರವಿವಾರ ದೇವಸ್ಥಾನಕ್ಕೆ ತನ್ನ ಮಗನೊಂದಿಗೆ ಹೋಗಿದ್ದ ಮಹಿಳೆ ನಂತರ ಮನೆಗೆ ವಾಪಸಾಗಿರಲಿಲ್ಲ ಆದರೆ ರಾತ್ರಿ 11 ಗಂಟೆಗೆ ಮೂವರು ಆರೋಪಿಗಳೂ ಮಹಿಳೆಯ ಮನೆಗೆ ಬಂದು ಆಕೆಯ ಮೃತದೇಹ ಹಸ್ತಾಂತರಿಸಿದ್ದರು, ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯಲ್ಲಿ ತೋರಿಸಿದ ವಿಳಂಬಕ್ಕಾಗಿ ಸ್ಥಳೀಯ ಠಾಣಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.







