ಸರಕಾರ ತಪ್ಪು ಮಾಡಿದಾಗ ಎಚ್ಚರಿಸುವುದು ಪಕ್ಷ ವಿರೋಧಿ ಕೆಲಸ ಅಲ್ಲ: ಬಿಜೆಪಿ ಶಾಸಕ ಯತ್ನಾಳ್
''ನಾನು ಯಾವುದಕ್ಕೂ ಅಂಜುವ ಮಗ ಅಲ್ಲ''

ಬೆಂಗಳೂರು, ಜ. 6: 'ನಾನು ಯಾವುದಕ್ಕೂ ಅಂಜುವ ಮಗ ಅಲ್ಲ. ಯಾವಾಗ ಬಾಣ ಬಿಡಬೇಕು, ಯಾವಾಗ ಮೌನಕ್ಕೆ ಶರಣಾಗಬೇಕೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಹೇಳಿ-ಕೇಳಿ ನಾನು ಉತ್ತರ ಕರ್ನಾಟಕದವನು. ಅಭಿವೃದ್ಧಿ ದೃಷ್ಟಿಯಿಂದ ನಾನು ಮಾತನಾಡುತ್ತೇನೆ' ಎಂದು ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಮೊನ್ನೆ ನಡೆದ ಶಾಸಕರ ಸಭೆಯಲ್ಲಿ ಒಬ್ಬನೇ ಗಲಾಟೆ ಮಾಡಿದ್ದು, ಉಳಿದ ಶಾಸಕರೆಲ್ಲರೂ ಸುಮ್ಮನಿದ್ದರು. ಯಡಿಯೂರಪ್ಪ ಸಭೆಯಲ್ಲಿ ಒಬ್ಬರೇ ಶಾಸಕರು ಗಲಾಟೆ ಮಾಡಿದ್ದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದು ಸತ್ಯ ಎಂದರು.
ಯಡಿಯೂರಪ್ಪ ಅವರ ಮನೆಗೆ ನಾನು ಮಂತ್ರಿ ಆಗುವ ಸಲುವಾಗಿ ಎಂದೂ ಹೋಗಿಲ್ಲ. ಜನರ ಭಾವನೆಗಳನ್ನು ಹೇಳುವ ಕೆಲಸ ಮಾಡಿದ್ದೇನೆ. ನಾನು ಕ್ಷಮೆಯಾಚಿಸಿದ್ದೇನೆ ಎಂದು ಹೇಳುವುದಿಲ್ಲ. ಅಭಿವೃದ್ಧಿ ಬಗ್ಗೆ ನಾನು ಮಾತನಾಡುತ್ತೇನೆ. ಜನಪರ ವಿಚಾರಗಳನ್ನೇ ನಾನು ಮಾತನಾಡಿದ್ದೇನೆ ಎಂದು ಅವರು ಸಮರ್ಥಿಸಿಕೊಂಡರು.
ಸರಕಾರ ತಪ್ಪು ಮಾಡಿದಾಗ ನಾನು ಎಚ್ಚರಿಸಿದ್ದೇನೆ. ಅದು ಪಕ್ಷ ವಿರೋಧಿ ಕೆಲಸ ಅಲ್ಲ. ಅಭಿವೃದ್ಧಿ ಪರ ನನ್ನ ಧ್ವನಿ ಯಾರಿಗೂ ನಿಲ್ಲಿಸಲು ಆಗುವುದಿಲ್ಲ. ನಾನು ಮಾತನಾಡುವಾಗ ಯಾರೂ ಖಂಡಿಸಿಲ್ಲ. ಯಾರೂ ನನಗೆ ವಿರೋಧ ಮಾಡಲಿಲ್ಲ. ಅಂದರೆ ಉಳಿದ ಶಾಸಕರಿಗೂ ನಾನು ಹೇಳಿದ್ದು ಸಹಮತ ಇದೆ ಎಂದೇ ಅರ್ಥ ಎಂದರು.
ದಿಢೀರ್ ಸಚಿವರಾಗಬೇಕೆಂದು ಒಬ್ಬರು ಅತೀ ನಿಷ್ಠೆ ತೋರಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಆಗಬೇಕೆಂದು ಕೆಲವರಿಗೆ ಇರಬಹುದು. ಯಡಿಯೂರಪ್ಪ ಅವರಿಗೆ ನಾನು ಮಾತಾಡಿದಾಗ ಬೇಸರವಾಗುತ್ತದೆಯೋ ಇಲ್ಲವೋ ತಿಳಿಯದು ಎಂದು ಯತ್ನಾಳ್, ಶಾಸಕ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಹುಲಿ-ಹುಲಿ ಅಂತೀರಿ: ನನ್ನ ವಿರುದ್ಧ ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸು ಸುಳ್ಳು. ಮಾಧ್ಯಮದವರು ಕೇಳಿದಕ್ಕೆ ಹಾಗೇ ಹೇಳಿರಬೇಕು. ಶಿವಾನಂದ ವೃತ್ತದ ಅಕ್ಕ-ಪಕ್ಕ ಇದ್ದವರಿಂದ ಸೂಚನೆ ಬರುತ್ತದೆ. ಬೆಳಗ್ಗೆ ಯತ್ನಾಳ್ ಸರಿಯಾಗಿ ಹೇಳಿದ್ದಾರೆ ಅಂತೀರಿ, ಸಂಜೆ ನಾಲಿಗೆ ಹರಿಬಿಟ್ಟ ಯತ್ನಾಳ್ ಅಂತ ಹಾಕ್ತೀರಿ. ಆ ಬಳಿಕ ಆ ಹುಲಿ ಈ ಹುಲಿ ಎಂದು ಹೇಳ್ತೀರಿ ಎಂದು ಯತ್ನಾಳ್ ಸುದ್ದಿ ಮಾಧ್ಯಮಗಳ ವಿರುದ್ಧವೇ ಹರಿಹಾಯ್ದರು.







