ನಾನು ಹೊನ್ನಾಳಿಯ ‘ಅಂಜದ ಗಂಡು': ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು, ಜ. 6: ‘ನಾನು ಉತ್ತರ ಕರ್ನಾಟಕವನ್ನು ಗೌರವಿಸುತ್ತೇನೆ. ನಾನು ಮಧ್ಯಕರ್ನಾಟಕ ಭಾಗದಿಂದ ಬಂದವನು. ಹೊನ್ನಾಳಿಯ ಅಂಜದ ಗಂಡು’ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿಯ ಶಾಸಕ ಎಂ.ಪಿ. ರೇಣುಕಾಚಾರ್ಯ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷ ಮತ್ತು ಹಿರಿಯ ಮುಖಂಡರ ವಿರುದ್ಧ ಯಾರೂ ಬಹಿರಂಗವಾಗಿ ಮಾತನಾಡಬಾರದು. ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಹೇಳಿದರು.
ಕೆಳಹಂತದಿಂದ ಹೋರಾಟ ಮಾಡುತ್ತಲೇ ಮೇಲಕ್ಕೇರಿದ ಬಿ.ಎಸ್.ಯಡಿಯೂರಪ್ಪನವರು ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ನಾನು ಯಡಿಯೂರಪ್ಪ ಪರವಾಗಿ ಮಾತನಾಡುತ್ತಿಲ್ಲ. ಯಡಿಯೂರಪ್ಪ ಅವರನ್ನು ಸಮರ್ಥನೆ ಮಾಡಿಕೊಳ್ಳದೆ ಕುಮಾರಸ್ವಾಮಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ? ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದರು.
ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ನಾನು ಮಂತ್ರಿಯಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು ಯಾರಿಗೂ ಹೆದರುವವನಲ್ಲ. ಯಾರನ್ನೂ ಹೆದರಿಸಿಲ್ಲ. ಹೊನ್ನಾಳಿಯ ಹೊಡೆತ ಇಡೀ ರಾಜ್ಯಕ್ಕೆ ಗೊತ್ತು. ವರ್ಷಕ್ಕೆ ಎರಡು ಬಾರಿ ಕುಸ್ತಿ ನಡೆಯುತ್ತದೆ. ಅದೂ ದೊಡ್ಡಮಟ್ಟದಲ್ಲಿ ನಡೆಯುತ್ತದೆ ಎಂದು ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.







