ಚೀನಾದ ಕ್ರಮಗಳು ಏಕಪಕ್ಷೀಯವಾಗಿವೆ: ರಕ್ಷಣಾ ಸಚಿವಾಲಯ
ಚೀನಾದಿಂದ ಅಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಬಳಕೆ, ಸೈನಿಕರ ನಿಯೋಜನೆ ಕುರಿತು ಮೊದಲ ಬಾರಿಗೆ ಉಲ್ಲೇಖ

ಹೊಸದಿಲ್ಲಿ,ಜ.6: ರಕ್ಷಣಾ ಸಚಿವಾಲಯವು ಇತ್ತೀಚಿಗೆ ಬಿಡುಗಡೆಗೊಳಿಸಿರುವ ತನ್ನ ವಾರ್ಷಿಕ ವರದಿಯಲ್ಲಿ,ಚೀನಿ ಸೇನೆಯು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯ ಹಲವಾರು ಪ್ರದೇಶಗಳಲ್ಲಿ ಏಕಪಕ್ಷೀಯ ಮತ್ತು ಪ್ರಚೋದನಾಕಾರಿ ಕೃತ್ಯಗಳಲ್ಲಿ ತೊಡಗಿಕೊಂಡಿದ್ದನ್ನು ಪ್ರಸ್ತಾಪಿಸಿದೆ. ಕೆಲವೇ ತಿಂಗಳುಗಳ ಹಿಂದೆ ರಕ್ಷಣಾ ಸಚಿವಾಲಯವು ಪೂರ್ವ ಲಡಾಖ್ ಪ್ರದೇಶದಲ್ಲಿ ಚೀನಾವು ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿದ್ದನ್ನು ಉಲ್ಲೇಖಿಸಿದ್ದ ವರದಿಯನ್ನು ತನ್ನ ಜಾಲತಾಣದಿಂದ ತೆಗೆದುಹಾಕಿತ್ತು.
‘ಎಲ್‌ಎಸಿಯ ಒಂದಕ್ಕಿಂತ ಹೆಚ್ಚಿನ ಪ್ರದೇಶಗಳಲ್ಲಿ ಬಲಪ್ರಯೋಗದಿಂದ ಯಥಾಸ್ಥಿತಿಯನ್ನು ಬದಲಿಸುವ ಚೀನಾದ ಏಕಪಕ್ಷೀಯ ಮತ್ತು ಪ್ರಚೋದನಾಕಾರಿ ಕ್ರಮಗಳಿಗೆ ನಮ್ಮ ಸೇನೆಯು ಫೂರ್ವ ಲಡಾಖ್‌ನಲ್ಲಿಯ ನಮ್ಮ ಹಕ್ಕುಗಳಿಗೆ ಚ್ಯುತಿ ಬಾರದಂತೆ ದೃಢವಾಗಿ ಮತ್ತು ಹೆಚ್ಚಿನ ಸಂಘರ್ಷಕ್ಕೆ ಎಡೆಮಾಡದೆ ಉತ್ತರಿಸಿದೆ ’ ಎಂದು ಸಚಿವಾಲಯವು ಜ.1ರಂದು ಬಿಡುಗಡೆಗೊಳಿಸಿರುವ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಸೇನೆಯು ಉಭಯ ದೇಶಗಳ ನಡುವಿನ ಎಲ್ಲ ಶಿಷ್ಟಾಚಾರಗಳು ಮತ್ತು ಒಪ್ಪಂದಗಳನ್ನು ಕಾಯ್ದುಕೊಂಡಿದೆ ಎಂದೂ ಅದು ಉಲ್ಲೇಖಿಸಿದೆ.
ರಕ್ಷಣಾ ಸಚಿವಾಲಯವು ಕಳೆದ ವರ್ಷದ ಆಗಸ್ಟ್‌ನಲ್ಲಿ ಜೂನ್ ತಿಂಗಳಿಗೆ ರಕ್ಷಣಾ ಇಲಾಖೆಯ ಪ್ರಮುಖ ಚಟುವಟಿಕೆಗಳನ್ನು ಪಟ್ಟಿ ಮಾಡಿದ್ದ ಮಾಸಿಕ ವರದಿಯನ್ನು ಅದನ್ನು ಅಪ್‌ಲೋಡ್ ಮಾಡಿದ್ದ ಮರುದಿನವೇ ತನ್ನ ಜಾಲತಾಣದಿಂದ ತೆಗೆದುಹಾಕಿತ್ತು. ಮೊದಲ ಬಾರಿಗೆ ಚೀನಿ ಅತಿಕ್ರಮಣವನ್ನು ಉಲ್ಲೇಖಿಸಿದ್ದರಿಂದ ವರದಿಯು ಮಹತ್ವವನ್ನು ಪಡೆದುಕೊಂಡಿತ್ತು. ಕಳೆದ ವರ್ಷದ ಎಪ್ರಿಲ್ ಮತ್ತು ಮೇ ತಿಂಗಳ ವರದಿಗಳಲ್ಲಿ ಚೀನಿ ಅತಿಕ್ರಮಣವನ್ನು ಉಲ್ಲೇಖಿಸಲಾಗಿರಲಿಲ್ಲ. ಜೂನ್ 19ರಂದು ನಡೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು,ಭಾರತದ ಭೂಪ್ರದೇಶವನ್ನು ಯಾರೂ ಅತಿಕ್ರಮಿಸಿಲ್ಲ ಎಂದೇ ಹೇಳಿದ್ದರು.
ಎರಡು ತಿಂಗಳ ಬಳಿಕ ಸಚಿವಾಲಯವು 2017ರಿಂದ ಅಪ್‌ಲೋಡ್ ಮಾಡಿದ್ದ ತನ್ನ ಎಲ್ಲ ಮಾಸಿಕ ವರದಿಗಳನ್ನು ಜಾಲತಾಣದಿಂದ ತೆಗೆದುಹಾಕಿತ್ತು.
ತನ್ಮಧ್ಯೆ ಈಗ ಬಿಡುಗಡೆಗೊಂಡಿರುವ ತನ್ನ ವಾರ್ಷಿಕ ವರದಿಯಲ್ಲಿ ಸಚಿವಾಲಯವು,ಚೀನಾ ಅಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಳಸಿದೆ ಮತ್ತು ಎಲ್‌ಎಸಿಯಲ್ಲಿ ಭಾರೀ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ನಿಯೋಜಿಸಿದೆ ಎಂದು ತಿಳಿಸಿದೆ. ತನ್ಮೂಲಕ ಇಂತಹ ಶಸ್ತ್ರಾಸ್ತ್ರಗಳು ಬಳಕೆಯಾಗಿದ್ದನ್ನು ರಕ್ಷಣಾ ಸಚಿವಾಲಯವು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.
ಗಲ್ವಾನ್ ಕಣಿವೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಕುರಿತಂತೆ ವರದಿಯು,20 ಭಾರತೀಯ ಯೋಧರು ತಮ್ಮ ಜೀವಗಳನ್ನು ಕಳೆದುಕೊಂಡಿದ್ದು,ಚೀನಿ ಸೇನೆಯಲ್ಲಿಯೂ ಗಣನೀಯ ಸಾವು ನೋವುಗಳು ಸಂಭವಿಸಿದ್ದವು ಎಂದು ಹೇಳಿದೆ. 2020,ಆ.28-29ರಂದು ಮುನ್ನೆಚ್ಚರಿಕೆ ಕ್ರಮದಲ್ಲಿ ಭಾರತೀಯ ಯೋಧರು ಚೀನಾದ ವಿಸ್ತರಣಾವಾದಿ ಹುನ್ನಾರವನ್ನು ವಿಫಲಗೊಳಿಸಿದ್ದರು ಮತ್ತು ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ದಂಡೆಯಲ್ಲಿಯ ಎತ್ತರದ ಪ್ರದೇಶಗಳ ಮೇಲೆ ತಮ್ಮ ಹಿಡಿತ ಸಾಧಿಸಿದ್ದರು ಎಂದು ಅದು ತಿಳಿಸಿದೆ.
ನಿಯಂತ್ರಣ ರೇಖೆ (ಎಲ್‌ಒಸಿ) ಕುರಿತಂತೆ ವರದಿಯು, ಕಾಶ್ಮೀರ ಕಣಿವೆಯೊಳಗೆ ಭಯೋತ್ಪಾದಕರನ್ನು ನುಸುಳಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ ಎಂದು ಹೇಳಿದೆ. ಪಾಕಿಸ್ತಾನಿ ಸೇನೆಯಿಂದ ಕದನ ವಿರಾಮ ಉಲ್ಲಂಘನೆಗಳಿಗೆ ಭಾರತೀಯ ಯೋಧರು ತಕ್ಕ ಉತ್ತರವನ್ನು ನೀಡಿದ್ದಾರೆ. ಪಾಕ್ ಸೇನೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ಸಾವುನೋವುಗಳು ಸಂಭವಿಸಿವೆ ಎಂದೂ ವರದಿಯು ತಿಳಿಸಿದೆ.







