ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ತಲುಪಲು ಕೇವಲ 10 ರೂ. ಖರ್ಚು !
ಸಕಾಲಕ್ಕೆ ರೈಲುಗಳು ತಲುಪಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ

ಬೆಂಗಳೂರು, ಜ.6: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಪರ್ಯಾಯ ಎಂದೇ ಹೇಳಲಾಗುತ್ತಿರುವ ಬೆಂಗಳೂರು ನಗರ -ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉಪನಗರ ರೈಲು ಸಂಚಾರ ಇತ್ತೀಚೆಗಷ್ಟೇ ಆರಂಭವಾಗಿದ್ದು, ಕೇವಲ 10 ರೂ. ಪಾವತಿಸಿ ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬಹುದಾಗಿದೆ.
ಆದರೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲುಗಳ ಸಂಚಾರವನ್ನು ಮತ್ತಷ್ಟು ಆಕರ್ಷಣೀಯಗೊಳಿಸಬೇಕಿದ್ದು, ನಿಗದಿತ ಅವಧಿಯೊಳಗೆ ರೈಲುಗಳು ವಿಮಾನ ನಿಲ್ದಾಣ ತಲುಪುವ ನಿಟ್ಟಿನಲ್ಲಿ ಯಲಹಂಕ ಹಾಗೂ ದೇವನಹಳ್ಳಿ ನಡುವೆ ಇರುವ ರೈಲ್ವೆ ಮಾರ್ಗವನ್ನು ಉತ್ತಮಗೊಳಿಸಬೇಕೆಂಬ ಬೇಡಿಕೆಯು ಸಾರ್ವಜನಿಕರಿಂದ ಕೇಳಿ ಬಂದಿದೆ.
ಈ ಸಂಬಂಧ thenewsminute.com ವರದಿಗಾರ ಪ್ರಜ್ವಲ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವಂತೆ, ''ಮಂಗಳವಾರ ಸಂಜೆ 5.55ಕ್ಕೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ರೈಲಿನಲ್ಲಿ ಪ್ರಯಾಣ ಆರಂಭಿಸಿದಾಗ, ಏರ್ ಕ್ರಾಫ್ಟ್‍ಗಳ ನಿರ್ವಹಣೆ ಮಾಡುವ ಇಂಜಿನಿಯರ್ ರಾಹುಲ್ ಎಂಬವರ ಪರಿಚಯವಾಯಿತು. ಅವರು ರಾತ್ರಿ 8.30ಕ್ಕೆ ಇರುವ ವಿಮಾನದಿಂದ ಚೆನ್ನೈಗೆ ಪ್ರಯಾಣಿಸಬೇಕಿತ್ತು. ರೈಲಿನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ ಏಕೈಕ ಪ್ರಯಾಣಿಕ ರಾಹುಲ್ ಆಗಿದ್ದರು'' ಎಂದು ತಿಳಿಸಿದ್ದಾರೆ.
ಹೊಸ ಮಾರ್ಗದಲ್ಲಿ ಸಂಚರಿಸುತ್ತಿರುವ ಈ ರೈಲು ನಿಗದಿತ ಅವಧಿಗಿಂತ ನಿಧಾನಗತಿಯಲ್ಲಿ ಸಾಗುತ್ತಿದ್ದರಿಂದ ರಾಹುಲ್ ಆತಂಕಗೊಂಡಿದ್ದರು. ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಹೊರಟ ರೈಲು 1 ಗಂಟೆ 17 ನಿಮಿಷದ ಬಳಿಕ ಸಂಜೆ 7.12ಕ್ಕೆ ದೇವನಹಳ್ಳಿ ಹಾಲ್ಟ್ ಸ್ಟೇಷನ್‍ಗೆ ತಲುಪಿತ್ತು (ನಿಗದಿತ ಅವಧಿಗಿಂತ 22 ನಿಮಿಷ ನಿಧಾನ). ಅಲ್ಲಿಂದ ಉಚಿತ ಶೆಟಲ್ ಬಸ್ ಮೂಲಕ 7.30ಕ್ಕೆ ರಾಹುಲ್ ವಿಮಾನ ನಿಲ್ದಾಣ ತಲುಪಿದರು. ರೈಲು ಪ್ರಯಾಣ ದರಕ್ಕೆ ರಾಹುಲ್ ಪಾವತಿಸಿದ್ದು ಕೇವಲ 10 ರೂ.ಗಳು ಮಾತ್ರ. ಕ್ಯಾಬ್ ಮೂಲಕ ಅವರು ವಿಮಾನ ನಿಲ್ದಾಣಕ್ಕೆ ಬಂದಿದ್ದರೆ 700 ರೂ.ವೆಚ್ಚವಾಗುತ್ತಿತ್ತು. ಬಸ್ಸಿನಲ್ಲಿ 270 ರೂ.ಗಳು ಆಗುತ್ತಿತ್ತು ಎಂದು ಪ್ರಜ್ವಲ್ ತಿಳಿಸಿದ್ದಾರೆ.
ರಾಹುಲ್ ಹೇಳುವ ಪ್ರಕಾರ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಜೆ ಉಂಟಾಗುವ ಸಂಚಾರ ದಟ್ಟಣೆಯ ಕಿರಿಕಿರಿಯಿಲ್ಲದೆ ಸಕಾಲಕ್ಕೆ ವಿಮಾನ ನಿಲ್ದಾಣ ತಲುಪಿದ್ದೇನೆ. ಆದರೆ, ರೈಲು ನಿಗದಿತ ಅವಧಿಗಿಂತ 20 ನಿಮಿಷ ತಡವಾಗಿ ಸಂಚರಿಸುತ್ತಿರುವುದರ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
''ಸಾಮಾಜಿಕ ಜಾಲತಾಣದಲ್ಲಿ ರೈಲಿನ ಸಂಚಾರದ ಸಮಯದ ಪಟ್ಟಿಯನ್ನು ನೋಡಿ ನಾನು ರೈಲಿನಲ್ಲಿ ತೆರಳಲು ತೀರ್ಮಾನಿಸಿದೆ. ಇನ್ನು ಮುಂದೆಯೂ ಈ ರೈಲಿನ ಮೂಲಕವೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತೇನೆ. ಅಲ್ಲದೆ, ಬೇರೆಯವರಿಗೂ ಈ ರೈಲಿನ ಬಗ್ಗೆ ಮಾಹಿತಿ ನೀಡಿ ಪ್ರೋತ್ಸಾಹಿಸುತ್ತೇನೆ'' ಎಂದು ರಾಹುಲ್ ತಿಳಿಸಿದ್ದಾರೆ.
ಮತ್ತೋರ್ವ ಪ್ರಯಾಣಿಕ, ಮೋಹನ್ ಎಂಬವರು ಪ್ರತಿದಿನ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ ಮಾಡುತ್ತಾರೆ. ಯಲಹಂಕ ಹಾಗೂ ದೇವನಹಳ್ಳಿ ನಡುವೆ ಸಿಂಗಲ್ ಟ್ರಾಕ್ ಇರುವುದರಿಂದ ರೈಲಿನ ಸಂಚಾರದಲ್ಲಿ ವ್ಯತ್ಯಯ ಆಗುತ್ತಿದೆ. ಈ ಮಾರ್ಗದಲ್ಲಿ ಡಬ್ಲಿಂಗ್ ಮಾಡಿದರೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಕಾರ್ಯಕರ್ತ ರಾಜ್‍ಕುಮಾರ್ ದುಗಾರ್ ಪ್ರಕಾರ, ದೇವನಹಳ್ಳಿ ಹಾಲ್ಟ್ ಸ್ಟೇಷನ್‍ಗೆ ತಲುಪುವ ಮಾರ್ಗದಲ್ಲಿರುವ ದೊಡ್ಡಜಾಲ ರೈಲು ನಿಲ್ದಾಣವನ್ನು ಕ್ರಾಸಿಂಗ್ ಸ್ಟೇಷನ್ ಆಗಿ ಮೇಲ್ದರ್ಜೆಗೇರಿಸಬೇಕು. ಸದ್ಯಕ್ಕೆ ಪ್ರತಿದಿನ 3500 ಮಂದಿ ರೈಲುಗಳ ಮೂಲಕ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಾರೆ. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಪ್ರತಿನಿತ್ಯ ಸುಮಾರು 30 ಸಾವಿರ ಜನ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುತ್ತಿರುತ್ತಾರೆ ಎಂದು ತಿಳಿಸಿದ್ದಾರೆ.
Hello, Bengaluru. I took the new airport train from Cantonment Station yesterday evening at 5:55 pm. On-board I met Rahul, a 27 year old aircraft maintanence engineer who had a flight at 8:30 pm to Chennai. He was the only passenger on the train who was going to the airport.
— Prajwal (@prajwalmanipal) January 5, 2021
I wrote about all this and more here. Kudos to Rahul for taking a risk. He boarded the train after seeing the schedule on a social media post. He says he will use the service regularly and he will encourage others as long as delays are minimal. https://t.co/42wdActihu
— Prajwal (@prajwalmanipal) January 5, 2021







