ಮಾಜಿ ಬಾರ್ಕ್ ಮುಖ್ಯಸ್ಥರ ಜಾಮೀನು ಅರ್ಜಿ ತಿರಸ್ಕೃತ
ಟಿಆರ್‌ಪಿ ಹಗರಣ

ಮುಂಬೈ,ಜ.6: ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್)ನ ಮಾಜಿ ಸಿಇಒ ಪಾರ್ಥೊ ದಾಸ್ ಗುಪ್ತಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿಯ ಹೆಚ್ಚುವರಿ ಮುಖ್ಯ ಮಹಾನಗರ ನ್ಯಾಯಾಲಯವು ತಿರಸ್ಕರಿಸಿದೆ. ಹಗರಣದಲ್ಲಿ ದಾಸ್ ಗುಪ್ತಾ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಅದು ಹೇಳಿದೆ.
ಡಿ.24ರಂದು ದಾಸಗುಪ್ತಾರನ್ನು ಬಂಧಿಸಿದ್ದ ಮುಂಬೈ ಪೊಲೀಸರು,ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ತನ್ನ ವಾಹಿನಿಯ ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳಲು ದಾಸ್ ಗುಪ್ತಾಗೆ ಲಕ್ಷಾಂತರ ರೂ.ಗಳ ಲಂಚವನ್ನು ನೀಡಿದ್ದರು ಎಂದು ನ್ಯಾಯಾಲಯದಲ್ಲಿ ಆರೋಪಿಸಿದ್ದರು.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಸ್.ಬಿ.ಭಾಜಿಪಾಲೆ ಅವರು, ದಾಸ್ ಗುಪ್ತಾ ಟಿವಿ ರೇಟಿಂಗ್ ಅಂಕಗಳನ್ನು ತಿರುಚಿದ್ದರು ಎನ್ನುವುದಕ್ಕೆ ಸಾಕ್ಷ್ಯಾಧಾರಗಳಿವೆ ಮತ್ತು ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಅಭಿಪ್ರಾಯಿಸಿದರು.
ತನ್ನ ಕಕ್ಷಿದಾರರ ವಿರುದ್ಧದ ಆರೋಪಗಳನ್ನು ಪೊಲೀಸರು ದೃಢೀಕರಿಸಿಲ್ಲ ಮತ್ತು ಪ್ರಕರಣದಲ್ಲಿಯ ಇತರ ಸಹ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಅಲ್ಲದೆ ಹಗರಣವು ನಡೆಯುವುದಕ್ಕೆ ಮೊದಲೇ 2019ರ ನವಂಬರ್‌ನಲ್ಲಿ ತನ್ನ ಕಕ್ಷಿದಾರರು ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು ಎಂಬ ದಾಸ್ ಗುಪ್ತಾ ಪರ ವಕೀಲ ಗಿರೀಶ ಕುಲಕರ್ಣಿ ಅವರ ವಾದವನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ.
ಇತರ ಆರೋಪಿಗಳು ಹಗರಣದಲ್ಲಿ ವಿಭಿನ್ನ ಪಾತ್ರವನ್ನು ಹೊಂದಿದ್ದರು, ಹೀಗಾಗಿ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ನ್ಯಾಯಾಲಯವು ತಿಳಿಸಿತು.







