ಟ್ರಂಪ್ ಒತ್ತಡದ ಹೊರತಾಗಿಯೂ ಫಲಿತಾಂಶದಲ್ಲಿ ಪೆನ್ಸ್ ಹಸ್ತಕ್ಷೇಪವಿಲ್ಲ: ಸಲಹೆಗಾರರು

ವಾಶಿಂಗ್ಟನ್, ಜ. 6: ತನ್ನ ಚುನಾವಣಾ ಸೋಲನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಂದ ಒತ್ತಡಕ್ಕೆ ಒಳಗಾಗಿರುವ ಹೊರತಾಗಿಯೂ, ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ತನ್ನ ಕರ್ತವ್ಯಗಳನ್ನು ಕಾನೂನು ಪ್ರಕಾರ ನಿಭಾಯಿಸುತ್ತಾರೆ ಎಂದು ಅವರ ಸಲಹೆಗಾರರು ಹೇಳಿದ್ದಾರೆ.
ನಿಯೋಜಿತ ಅಧ್ಯಕ್ಷ ಜೋ ಬೈಡನ್ ವಿಜಯಿಯಾಗಿದ್ದಾರೆಂದು ಸಂಸತ್ತು ಕಾಂಗ್ರೆಸ್ ನೀಡಲಿರುವ ಪ್ರಮಾಣಪತ್ರ ಪ್ರಕ್ರಿಯೆಯನ್ನು ಪೆನ್ಸ್ ತಡೆಯುವುದಿಲ್ಲ ಎಂದಿದ್ದಾರೆ.
ಅಧಿಕಾರದಲ್ಲಿ ಮುಂದುವರಿಯುವ ತನ್ನ ಅಭೂತಪೂರ್ವ ಪ್ರಯತ್ನಗಳ ಭಾಗವಾಗಿ, ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ವಿಜಯಿಯಾಗಿದ್ದಾರೆಂದು ಪ್ರಮಾಣಪತ್ರ ನೀಡುವುದರಿಂದ ಕಾಂಗ್ರೆಸ್ಸನ್ನು ತಡೆಯುವಂತೆ ಟ್ರಂಪ್ ಮಂಗಳವಾರ ಪೆನ್ಸ್ ಮೇಲೆ ಒತ್ತಡ ಹೇರಿದ್ದರು.
ಬೈಡನ್‌ರ ಚುನಾವಣಾ ವಿಜಯವನ್ನು ರದ್ದುಪಡಿಸುವಂತೆ ಕೋರಿ ಟ್ರಂಪ್ ಪ್ರಚಾರ ತಂಡ ಹೂಡಿರುವ ಹತ್ತಾರು ಮೊಕದ್ದಮೆಗಳನ್ನು ಅಮೆರಿಕದಾದ್ಯಂತದ ನ್ಯಾಯಾಲಯಗಳು ತಿರಸ್ಕರಿಸಿದ ಬಳಿಕ ಟ್ರಂಪ್ ಈ ಕ್ರಮಕ್ಕೆ ಮುಂದಾಗಿದ್ದಾರೆ.
ಅಧ್ಯಕ್ಷರಾಗಿ ಟ್ರಂಪ್‌ರ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಪೆನ್ಸ್, ಟ್ರಂಪ್‌ರ ನಿಷ್ಠಾವಂತ ಅನುಯಾಯಿಯಾಗಿದ್ದಾರೆ. ಪ್ರಮಾಣಪತ್ರ ವಿತರಣೆ ಪ್ರಕ್ರಿಯೆಯಲ್ಲಿ ನಾನು ಹಸ್ತಕ್ಷೇಪ ನಡೆಸುವ ಉದ್ದೇಶವನ್ನು ಹೊಂದಿಲ್ಲ ಎಂದು ಪೆನ್ಸ್ ಹೇಳಿದ್ದಾರೆ.
ಹೀಗೆ ಮಾಡಲು ನನಗೆ ಅಧಿಕಾರವಿಲ್ಲ ಎಂಬುದಾಗಿ ಅವರು ಟ್ರಂಪ್‌ಗೆ ಹೇಳಿದ್ದಾರೆನ್ನಲಾಗಿದೆ.
‘‘ಉಪಾಧ್ಯಕ್ಷರು ಅಧ್ಯಕ್ಷ ಟ್ರಂಪ್‌ರ ಕಟ್ಟಾ ಬೆಂಬಲಿಗರಾಗಿದ್ದಾರೆ. ಆದರೆ, ಅವರು ಸಂವಿಧಾನದ ಪ್ರಕಾರ ಕೆಲಸ ಮಾಡಲಿದ್ದಾರೆ’’ ಎಂದು ಅವರ ಸಲಹೆಗಾರರೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.
ಜಾರ್ಜಿಯದಲ್ಲಿ ಸೋಮವಾರ ರಾತ್ರಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲೇ ಪೆನ್ಸ್ ಮೇಲೆ ಒತ್ತಡ ಹಾಕುವ ಕಾರ್ಯವನ್ನು ಟ್ರಂಪ್ ಆರಂಭಿಸಿದ್ದರು. ಬೈಡನ್ ಆಯ್ಕೆಯನ್ನು ರದ್ದುಪಡಿಸಲು ಪೆನ್ಸ್ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದರು.
‘‘ಇದನ್ನು ಅವರು ಮಾಡದಿದ್ದರೆ, ನಾನು ಅವರನ್ನು ಮುಂದೆ ಈಗಿನಷ್ಟು ಇಷ್ಟಪಡುವುದಿಲ್ಲ’’ ಎಂದಿದ್ದರು.
ಪೆನ್ಸ್‌ರ ರಾಜಕೀಯ ಭವಿಷ್ಯವು ಟ್ರಂಪ್‌ರ ಬೆಂಬಲಿಗರನ್ನು ಖುಷಿಪಡಿಸುವುದರಲ್ಲಿ ಅಡಗಿದೆ!







