ರಾಷ್ಟ್ರದಲ್ಲೆ ಕರ್ನಾಟಕವನ್ನು ಮಾದರಿ ರಾಜ್ಯವಾಗಿ ಮಾಡುವ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ

ಬೀದರ್, ಜ.6: ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಂಡು, ಕರ್ನಾಟಕವನ್ನು ರಾಷ್ಟ್ರದಲ್ಲೆ ಮಾದರಿ ರಾಜ್ಯವಾಗಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಬೀದರ್ ನಗರದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಹಾಗೂ ಇನ್ನಿತರ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೋವಿಡ್, ಪ್ರವಾಹ, ಅತಿವೃಷ್ಟಿ, ಹಣಕಾಸಿನ ಸಮಸ್ಯೆಗಳಿಂದ ಈ ವರ್ಷ ನಿರೀಕ್ಷೆಯಂತೆ ಗುರಿಮುಟ್ಟಲಾಗಿಲ್ಲ. ಮುಂದಿನ ದಿನಗಳಲ್ಲಿ ಬೀದರ್ ಜಿಲ್ಲೆ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದರು.
ರಾಜ್ಯ ಸರಕಾರ ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಬದ್ಧವಾಗಿದ್ದು, ಮುಂದಿನ 5 ವರ್ಷದಲ್ಲಿ 125 ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ತೆರೆಯುವ ಗುರಿ ಹೊಂದಿದೆ. ಇದೀಗ ಉದ್ಘಾಟನೆಗೊಂಡಿರುವ ನೂರು ಹಾಸಿಗೆಗಳ ಆಸ್ಪತ್ರೆ ಅತ್ಯಾಧುನಿಕ ಆಸ್ಪತ್ರೆಯಾಗಿದ್ದು, 24 ಗಂಟೆಯೂ ತಾಯಿ ಮತ್ತು ಮಕ್ಕಳ ಆರೈಕೆ ಮಾಡುತ್ತದೆ. ಈ ನಿಟ್ಟಿನಲ್ಲಿ ಪರಿಣಿತ ವೈದ್ಯರ ತಂಡ ಈ ಆಸ್ಪತ್ರೆಯಲ್ಲಿದೆ ಎಂದು ಅವರು ಹೇಳಿದರು.
ಗರ್ಭಿಣಿ ಮತ್ತು ನವಜಾತ ಶಿಶುಗಳ ಮರಣಗಳ ಅನುಪಾತ ತಗ್ಗಿಸುವುದು ಹಾಗೂ ಗರ್ಭಿಣಿ ಹಾಗೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಸೇವೆ ನೀಡಬೇಕೆಂಬುದು ಎಲ್ಲರ ಆಶಯವಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. 2018ರ ನೀತಿ ಆಯೋಗದ ಶ್ರೇಯಾಂಕದ ಪ್ರಕಾರ ಕೇರಳ ಮತ್ತು ತಮಿಳುನಾಡು ಬಿಟ್ಟರೆ ಕರ್ನಾಟಕ ಅತ್ಯುತ್ತಮ ಆರೋಗ್ಯ ಸೇವೆ ನೀಡುವ ರಾಜ್ಯವಾಗಿದೆ. ದೇಶದ ಆರೋಗ್ಯ ಕ್ಷೇತ್ರದ ಸರಾಸರಿ ಅಂಕಕ್ಕಿಂತ ರಾಜ್ಯದ ಸರಾಸರಿ ಅಂಕ ಹೆಚ್ಚಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಇಂದು ಖಾಸಗಿ ಆಸ್ಪತ್ರೆಗಳು ಬಡವರಿಗೆ ತುಟ್ಟಿಯಾಗಿ ಪರಿಣಮಿಸಿವೆ. ಪರಿಣಿತ ವೈದ್ಯರನ್ನೊಳಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬಡವರಿಗೆ ಪೂರಕವಾಗಿದೆ. 2008ರಲ್ಲಿ ಅಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 20 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಇಂದು ಅವರೇ ಉದ್ಘಾಟಿಸುತಿರುವುದು ಸಂತಸ ತಂದಿದೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ 2500 ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಮುಂದಿನ 15 ದಿನಗಳಲ್ಲಿ ಪ್ರಕ್ರಿಯೆ ಮುಗಿಯಲಿದೆ ಎಂದರು.
ಇತರೆ ಕಾಮಗಾರಿಗಳು: 5.22 ಕೋಟಿ ರೂಪಾಯಿ ವೆಚ್ಚದಲ್ಲಿ ಬೀದರ್ ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್, 4.90 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಶೂಶ್ರುಷ ಶಾಲೆ, ಕಾಲೇಜು ಕಟ್ಟಡ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣ, 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಸಂತೆಗಳ ಅಭಿವೃದ್ಧಿ (ಮನ್ನಳ್ಳಿ, ಕಮಠಾಣಾ ಹಾಗೂ ಬೆನಕನಹಳ್ಳಿ) ಕಾಮಗಾರಿಗಳ ಲೋಕಾರ್ಪಣೆ ಈ ಸಂದರ್ಭದಲ್ಲಿ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಮೀಸ್ಥಾನಪುರ ಉಪಪ್ರಾಂಗಣದಲ್ಲಿ ಹಮಾಲರಿಗೆ ಮನೆ ನಿರ್ಮಾಣಕ್ಕಾಗಿ ನಿವೇಶನದ ಹಕ್ಕುಪತ್ರಗಳನ್ನು ಮುಖ್ಯಮಂತ್ರಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷಣ ಸವದಿ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ, ಜಿ.ಪಂ.ಅಧ್ಯಕ್ಷೆ ನಿರ್ಮಲಾ ವೈಜನಾಥ್ ಮಾನೆಗೋಪಾಳೆ, ವಿಧಾನ ಪರಿಷತ್ ಸದಸ್ಯ ರಘುನಾಥ್‍ರಾವ್ ಮಲ್ಕಾಪೂರೆ, ಶಾಸಕ ರಹೀಮ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







