ಜ.15, 20ರಂದು ರಾಜ್ಯಾದ್ಯಂತ 'ಸಪ್ತಪದಿ ಸಾಮೂಹಿಕ ವಿವಾಹ': ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು, ಜ. 6: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಮುಜರಾಯಿ ಇಲಾಖೆಯ ‘ಸಪ್ತಪದಿ ಸಾಮೂಹಿಕ ವಿವಾಹ' ಕಾರ್ಯಕ್ರಮಕ್ಕೆ ಪುನಃ ಚಾಲನೆ ನೀಡಲಾಗುವುದು ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ನಡೆದ ಧಾರ್ಮಿಕ ಪರಿಷತ್ತಿನ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜ.15 ಮತ್ತು 20ರಂದು ರಾಜ್ಯಾದ್ಯಂತ ‘ಸಪ್ತಪದಿ ಸಾಮೂಹಿಕ ವಿವಾಹ' ಕಾರ್ಯಕ್ರಮ ನಡೆಯಲಿದೆ. ಎರಡನೆ ಹಂತದಲ್ಲಿ ಫೆಬ್ರವರಿ 17 ಮತ್ತು 27ರಂದು ರಾಜ್ಯಮಟ್ಟದಲ್ಲಿ ನಡೆಯಲಿದೆ. ಇನ್ನು ಮುಂದೆ ಪ್ರತಿ ತಿಂಗಳೂ ಸಪ್ತಪದಿ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ ಎಂದರು.
ಸಪ್ತಪದಿ ವಧುವಿಗೆ 40 ಸಾವಿರ ರೂ. ಮೌಲ್ಯದ ಮಾಂಗಲ್ಯವನ್ನು ನೀಡಲಾಗುವುದು. ಕಾವೇರಿ ಎಂಪೋರಿಯಂ ಮೂಲಕ ಮಾಂಗಲ್ಯ ಖರೀದಿಸಲು ತೀರ್ಮಾನಿಸಲಾಗಿದೆ ಎಂದ ಅವರು, ಆಡಳಿತದಲ್ಲಿ ಪಾರದರ್ಶಕತೆ ತರಲು ಇನ್ನು ಮುಂದೆ ಮುಜರಾಯಿ ಆಡಳಿತ ಇ-ಆಡಳಿತವಾಗಿ ಮಾರ್ಪಡಲಿದೆ. ಕಡತ ವಿಲೇವಾರಿ ಮತ್ತು ಕಾಗದಪತ್ರಗಳ ವ್ಯವಹಾರ ಡಿಜಿಟಲ್ ರೂಪದಲ್ಲಿ ನಡೆಯಲಿದೆ ಎಂದರು.
ಜಿಲ್ಲಾ ಮಟ್ಟದ ಧಾರ್ಮಿಕ ಪರಿಷತ್ ಸದಸ್ಯರಿಗೆ ನಾಳೆ (ಜ.7) ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗ್ಗಡೆ, ಆರ್ಟ್ ಆಫ್ ಲಿವಿಂಗ್‍ನ ರವಿಶಂಕರ ಗುರೂಜಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.







