ಪಂಚಾಯತ್ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಿಸಿ: ನರಹಳ್ಳಿ ಬಾಲಸುಬ್ರಹ್ಮಣ್ಯ

ಬೆಂಗಳೂರು, ಜ.6: ರಾಜ್ಯ ಸರಕಾರ ಪ್ರತಿ ಗ್ರಾಮ ಪಂಚಾಯತ್‍ಗಳಲ್ಲಿ ಸುಸಜ್ಜಿತವಾದ ಗ್ರಂಥಾಲಯಕ್ಕೆ ಮುಂದಾಗಬೇಕೆಂದು ಹಿರಿಯ ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಮನವಿ ಮಾಡಿದ್ದಾರೆ.
ಬುಧವಾರ ಕನ್ನಡ ಪುಸ್ತಕ ಪ್ರಾಧಿಕಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 2019ನೆ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಜೆ.ಎಚ್.ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಊರಿಗೊಂದು ಗ್ರಂಥಾಲಯ, ಮನೆಗೊಂದು ಶೌಚಾಲಯ ಇರಬೇಕೆಂದು ಕಾರ್ಯಕ್ರಮ ರೂಪಿಸಿದ್ದರು. ಈಗ ಆದೇ ಮಾದರಿಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣಕ್ಕೆ ರಾಜ್ಯ ಸರಕಾರ ಆಸಕ್ತಿ ವಹಿಸಬೇಕೆಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅಂಗೈಯಲ್ಲೇ ಎಲ್ಲವೂ ಸಿಗುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ನಾವು ಪುಸ್ತಕ ಓದು ಸಂಸ್ಕೃತಿಯನ್ನು ಯುವ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಇ-ಬುಕ್ ವ್ಯವಸ್ಥೆ ಅನಿವಾರ್ಯವೆಂದು ಅವರು ಹೇಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ಮಾತನಾಡಿ, ಹೊಸ ಪುಸ್ತಕ ನೀತಿ ತರುವ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿಗಳು ಮತ್ತು ಮಾರ್ಗದರ್ಶಕರ ಸಲಹೆ ಪಡೆದು ಮುಂದುವರಿಯುವುದಾಗಿ ತಿಳಿಸಿದ್ದಾರೆ. ಈ ವೇಳೆ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್‍ಸಿಂಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಕನ್ನಡ ಪುಸ್ತಕ ಸೊಗಸು ಪ್ರಶಸ್ತಿ ನೀಡಲಾಯಿತು.
ಗ್ರಂಥಾಲಯ ಬಳಕೆಗಾಗಿಯೇ ಸಾರ್ವಜನಿಕರು ತೆರಿಗೆ ನೀಡುತ್ತಿದ್ದಾರೆ. ಈ ಹಣವನ್ನು ಗ್ರಂಥಾಲಯ ಇಲಾಖೆ ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಪುಸ್ತಕ ಖರೀದಿಗೆ, ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲು ಸರಕಾರ ಕ್ರಮ ಕೈಗೊಳ್ಳಬೇಕು. ಇದಕ್ಕೆ ಪೂರಕವಾಗಿ ಬೆಂಗಳೂರು ಗ್ರಂಥಾಲಯ ಇಲಾಖೆಯ ಸೆಸ್‍ನ್ನು ಆ ಇಲಾಖೆಯೇ ಬಳಕೆ ಮಾಡಿಕೊಳ್ಳುವಂತಾಗಬೇಕು.
-ನರಹಳ್ಳಿ ಬಾಲಸುಬ್ರಹ್ಮಣ್ಯ, ಹಿರಿಯ ಸಾಹಿತಿ
ಸಂಶೋಧಕ ಎಂ.ಎಂ.ಕಲಬುರಗಿ ಅವರಂತಹ ವಿಚಾರವಂತಹ ಹತ್ಯೆ ಮತ್ತು ವಿಚಾರಗಳ ದಮನ ಮಾಡುವುದು ಮಾನವೀಯತೆಯ ಇಲ್ಲದವರ ಕೃತ್ಯವಾಗಿದೆ. ಇಂತಹ ಪಾಪ ಕೃತ್ಯಗಳು ಕನ್ನಡ ಸಂಸ್ಕøತಿಕ ಲೋಕದ ಘನತೆಯನ್ನು ಹಾಳು ಮಾಡುತ್ತಿದೆ.
-ಬಸವರಾಜ ಕಲ್ಗುಡಿ, ಚಿಂತಕ






.jpg)
.jpg)

