ರೂಪಾಂತರಿತ ಕೊರೋನ ಸೋಂಕು ಪ್ರಕರಣ ಸಂಖ್ಯೆ 71ಕ್ಕೇರಿಕೆ

ಹೊಸದಿಲ್ಲಿ, ಜ. 6: ದೇಶದಲ್ಲಿ ರೂಪಾಂತರಿತ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 71ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಸಚಿವಾಲಯ ಮಂಗಳವಾರದ ವರೆಗೆ ಘೋಷಿಸಿದ 28 ಪ್ರಕರಣಗಳು ಕೂಡ ಈ 71 ಪ್ರಕರಣಗಳಲ್ಲಿ ಸೇರಿವೆ.
ಈ ಎಲ್ಲಾ ಸೋಂಕಿತರನ್ನು ಸಂಬಂಧಿತ ರಾಜ್ಯ ಸರಕಾರಗಳ ನಿಯೋಜಿತ ಆರೋಗ್ಯ ಸೇವೆ ಸೌಲಭ್ಯಗಳ ಏಕ ಐಸೋಲೇಶನ್ ಕೊಠಡಿಗಳಲ್ಲಿ ಇರಿಸಲಾಗಿದೆ. ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಸಚಿವಾಲಯ ಮಂಗಳವಾರ ತಿಳಿಸಿತ್ತು. ಸಹ ಪ್ರಯಾಣಿಕರು, ಕುಟುಂಬ ಹಾಗೂ ಇತರರ ಸಮಗ್ರ ಸಂಪರ್ಕಗಳನ್ನು ಪತ್ತೆ ಹಚ್ಚಲು ಆರಂಭಿಸಲಾಗಿದೆ ಎಂದು ಸಚಿವಾಲಯ ಹೇಳಿತ್ತು. ಇತರ ಮಾದರಿಗಳಲ್ಲಿ ಜೆನೂಮ್ ಅನುಕ್ರಮದ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ. ನಿಗಾ, ಕಂಟೈನ್ಮೆಂಟ್, ಪರೀಕ್ಷೆ ವರ್ಧಿಸಲು ಹಾಗೂ ಐಎನ್‌ಎಸ್‌ಎಒಜಿ ಲ್ಯಾಬ್‌ಗಳಿಗೆ ಮಾದರಿಗಳ ರವಾನಿಸಲು ರಾಜ್ಯಗಳಿಗೆ ನಿರಂತರ ಸಲಹೆಗಳನ್ನು ನೀಡಲಾಗುತ್ತಿದೆ. ಬ್ರಿಟನ್‌ನಲ್ಲಿ ಪತ್ತೆಯಾದ ರೂಪಾಂತರಿತ ಕೊರೋನ ವೈರಾಣುವಿನ ವರದಿಯ ಬಗ್ಗೆ ಭಾರತ ಸರಕಾರಕ್ಕೆ ಅರಿವಿದೆ. ಅಲ್ಲದೆ, ರೂಪಾಂತರಿತ ವೈರಾಣುವನ್ನು ಪತ್ತೆ ಹಚ್ಚಲು ಹಾಗೂ ತಡೆಯಲು ಪೂರ್ವಭಾವಿ ಹಾಗೂ ನಿಯಂತ್ರಣ ಕಾರ್ಯತಂತ್ರಗಳನ್ನು ತೆಗೆದುಕೊಂಡಿದೆ ಎಂದು ಸಚಿವಾಲಯ ತಿಳಿಸಿದೆ.







