ಪೆಟ್ರೋಲ್ ಬೆಲೆ ಸಾರ್ವಕಾಲಿಕ ದಾಖಲೆಯ ಸನಿಹಕ್ಕೆ

ಹೊಸದಿಲ್ಲಿ, ಜ. 6: ಸರಿಸುಮಾರು ತಿಂಗಳ ಅಂತರದ ಬಳಿಕ ಸರಕಾರಿ ಸ್ವಾಮಿತ್ವದ ತೈಲ ಕಂಪೆನಿಗಳು ತೈಲ ಬೆಲೆ ಏರಿಸಿರುವುದರಿಂದ ಪೆಟ್ರೋಲ್ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆಯ ಸನಿಹಕ್ಕೆ ತಲುಪಿದೆ.
ಪೆಟ್ರೋಲ್ ಬೆಲೆ ಲೀಟರಿಗೆ 26 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರಿಗೆ 25 ಪೈಸೆ ಏರಿಕೆಯಾಗಿದೆ ಎಂದು ತೈಲ ಮಾರುಕಟ್ಟೆ ಕಂಪೆನಿಗಳ ಅಧಿಸೂಚನೆ ತಿಳಿಸಿದೆ. ಬೆಲೆ ಏರಿಕೆಯಾದ ಬಳಿಕ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 83.71 ರೂಪಾಯಿ ಇದ್ದುದು 83.97 ರೂಪಾಯಿಗೆ ತಲುಪಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 73.87 ರೂಪಾಯಿ ಇದ್ದುದು 74.12 ರೂಪಾಯಿಗೆ ತಲುಪಿದೆ. ಮುಂಬೈಯಲ್ಲಿ ಡೀಸೆಲ್ ಬೆಲೆ ಸಾರ್ವಕಾಲಿಕ ಏರಿಕೆಯಾಗಿ ಪ್ರತಿ ಲೀಟರ್‌ಗೆ 80.78 ರೂಪಾಯಿಗೆ ತಲುಪಿದೆ. ಇದು ಸುಮಾರು ಒಂದು ತಿಂಗಳಲ್ಲಿ ಮಾಡಲಾದ ಮೊದಲ ಬೆಲೆ ಪರಿಷ್ಕರಣೆ.
ಈಗ ಬೆಲೆಗಳು ಸಾರ್ವಕಾಲಿಕ ದಾಖಲೆಯ ಏರಿಕೆಯಾಗಿದೆ. ಈ ಹಿಂದೆ 2018 ಅಕ್ಟೋಬರ್ 4ರಂದು ದಿಲ್ಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಇದುವರೆಗಿನ ಅತ್ಯಧಿಕ 84 ರೂಪಾಯಿಗೆ ತಲುಪಿತ್ತು. 2018 ಅಕ್ಟೋಬರ್ 4ರಂದು ಪ್ರತಿ ಲೀಟರ್ ಡೀಸೆಲ್‌ನ ಬೆಲೆ ಸಾರ್ವಕಾಲಿಕ ದಾಖಲೆಯ ಅತ್ಯಧಿಕ 75.45 ರೂಪಾಯಿಗೆ ತಲುಪಿತ್ತು.





