ಯಾವುದೇ ಷರತ್ತುಗಳಿಲ್ಲದೇ ಆಫ್ರಿಕನ್ ದೇಶಗಳಿಗೆ ನೆರವು : ಭದ್ರತಾ ಮಂಡಳಿಯಲ್ಲಿ ಭಾರತ ಘೋಷಣೆ

ಹೊಸದಿಲ್ಲಿ : ಚೀನಾದಿಂದ ರಿಯಾಯಿತಿ ದರದಲ್ಲಿ ಸಾಲ ಪಡೆದ ಹಲವು ಆಫ್ರಿಕನ್ ದೇಶಗಳು ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಆಫ್ರಿಕಾದ ಆದ್ಯತೆಗಳಿಗೆ ಅನುಗುಣವಾಗಿ ಯಾವುದೇ ಷರತ್ತುಗಳಿಲ್ಲದೇ ಆಫ್ರಿಕನ್ ದೇಶಗಳಿಗೆ ನೆರವು ನೀಡುವುದಾಗಿ ಭಾರತ ಘೋಷಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಚರ್ಚೆಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗಲ, ಆಫ್ರಿಕವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಭಾರತ ತನ್ನ ನೆರವು ಮುಂದುವರಿಸಲಿದೆ. ಎಲ್ಲರ ಪಾಲ್ಗೊಳ್ಳುವಿಕೆಯ, ಸುಸ್ಥಿರ, ಪಾರದರ್ಶಕ ಮತ್ತು ಘನತೆ ಗೌರವದೊಂದಿಗೆ ಸಾಮಾಜಿಕ ಆರ್ಥಿಕ ಪ್ರಗತಿ ಸಾಧಿಸುವ ಆಫ್ರಿಕ ಆಕಾಂಕ್ಷೆಗಳಿಗೆ ಭಾರತ ನೆರವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು 2018ರ ಜುಲೈನಲ್ಲಿ ಉಗಾಂಡಾ ಸಂಸತ್ತಿನಲ್ಲಿ ಮಾಡಿದ ಭಾಷಣಕ್ಕೆ ಅನುಸಾರವಾಗಿ ಆಫ್ರಿಕಾದಲ್ಲಿ ಭಾರತದ ತೊಡಗಿಸಿಕೊಳ್ಳುವಿಕೆಯ ಹತ್ತು ಮಾರ್ಗದರ್ಶಿ ತತ್ವಗಳಿಗೆ ಅನುಸಾರವಾಗಿ ಭಾರತ ತನ್ನ ನೆರವು ಮುಂದುವರಿಸಲಿದೆ ಎಂದು ಹೇಳಿದರು.
ಆಫ್ರಿಕಾ ಖಂಡದಲ್ಲಿ ಇರುವ ಸೂಕ್ಷ್ಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಶಾಂತಿ ಮತ್ತು ಭದ್ರತೆಯನ್ನು ನಿರ್ವಹಿಸುವ ಸವಾಲುಗಳು ಎಂಬ ವಿಷಯದ ಬಗೆಗಿನ ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
37 ಆಫ್ರಿಕನ್ ದೇಶಗಳಲ್ಲಿ 189 ಅಭಿವೃದ್ಧಿ ಯೋಜನೆಗಳನ್ನು ಭಾರತ ಕಾರ್ಯಗತಗೊಳಿಸಿದೆ. 12.86 ಶತಕೋಟಿ ಡಾಲರ್ ಮೌಲ್ಯದ ಸುಮಾರು 77 ಯೋಜನೆಗಳು ಕಾರ್ಯಗತಗೊಳ್ಳುವ ಹಂತದಲ್ಲಿವೆ. ಅಂತರರಾಷ್ಟ್ರೀಯ ಸೌರ ಕೂಟದ ಬದ್ಧತೆಗೆ ಅನುಗುಣವಾಗಿ ಆಫ್ರಿಕನ್ ದೇಶಗಳ ಸೌರಶಕ್ತಿ ಯೋಜನೆಗಳಿಗೆ 1.7 ಶತಕೋಟಿ ಡಾಲರ್ ನೆರವು ನೀಡಲಾಗುವುದು ಎಂದು ವಿವರಿಸಿದರು. ಆಫ್ರಿಕನ್ ವಿದ್ಯಾರ್ಥಿಗಳಿಗೆ ಭಾರತ 50 ಸಾವಿರ ವಿದ್ಯಾರ್ಥಿ ವೇತನ ನೀಡುತ್ತಿದೆ ಎಂದರು.







