ಅಮೆರಿಕದ ಸಂಸತ್ ನಲ್ಲಿ ಟ್ರಂಪ್ ಬೆಂಬಲಿಗರ ಪ್ರತಿಭಟನೆ, ಹಿಂಸಾಚಾರಕ್ಕೆ ನಾಲ್ವರು ಬಲಿ

ವಾಷಿಂಗ್ಟನ್: ಜೋ ಬೈಡನ್ ಅವರ ಚುನಾವಣಾ ಗೆಲುವನ್ನು ಪ್ರಮಾಣೀಕರಿಸಲು ಕಾಂಗ್ರೆಸ್ ಅಧಿವೇಶನ ನಡೆಯುತ್ತಿದ್ದಾಗಲೇ ಸಂಸತ್ತಿನೊಳಗೆ ನುಗ್ಗಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿರುವ ಪ್ರತಿಭಟನೆ ಹಾಗೂ ಗಲಭೆಯಲ್ಲಿ ಪೊಲೀಸ್ ಅಧಿಕಾರಿಯಿಂದ ಗುಂಡಿಗೆ ಬಲಿಯಾದ ಮಹಿಳೆಯ ಸಹಿತ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ.
ಟ್ರಂಪ್ ಪರ ದಂಗೆಕೋರರು, ಕಿಟಕಿಗಳನ್ನು ಒಡೆಯುವುದು, ರಾಫ್ಟರ್ ಗಳ ಮೇಲೆ ಹತ್ತುವುದು, ಅಮೆರಿಕದ ಧ್ವಜಗಳನ್ನು ಕಿತ್ತುಹಾಕುವುದು ಹಾಗೂ ಸೆನೆಟ್ ಕೊಠಡಿಗಳಲ್ಲಿ ತಿರುಗಾಡುವುದನ್ನು ನೋಡಿದ ಬಳಿಕ ಹಿಂಸಾಚಾರಕ್ಕೆ ಸಂಬಂಧಿಸಿ 52 ಜನರನ್ನು ಬಂಧಿಸಲಾಗಿದೆ ಎಂದು ತಡರಾತ್ರಿಯ ಸುದ್ದಿಗೋಷ್ಠಿಯಲ್ಲಿ ಮೆಟ್ರೋ ಪಾಲಿಟನ್ ಪೊಲೀಸ್ ಇಲಾಖೆಮುಖ್ಯಸ್ಥ ರಾಬರ್ಟ್ ಜೆ ಕಾಂಟೀ ಹೇಳಿದ್ದಾರೆ.
ಹೌಸ್ ಹಾಗೂ ಸೆನೆಟ್, ಇಡೀ ಕ್ಯಾಪಿಟಲ್ ಎರಡನ್ನೂ ಲಾಕ್ ಡೌನ್ ನಲ್ಲಿ ಇರಿಸಲಾಯಿತು. ಉಪಾಧ್ಯಕ್ಷ ಮೈಕ್ ಪೆನ್ಸ್ ಹಾಗೂ ಸಂಸದರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಟ್ರಂಪ್ ಬೆಂಬಲಿಗರಿಂದ ಅಮೆರಿಕದ ಸಂಸತ್ತನ್ನು ತೆರವುಗೊಳಿಸಲು ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ ಭದ್ರತಾಪಡೆಗಳು ಅಶ್ರುವಾಯು ಸುರಿಸಿದರು.





