ದಂಗೆಕೋರರನ್ನು “ಅಮೆರಿಕದ ದೇಶಪ್ರೇಮಿಗಳು’’ ಎಂದು ಟ್ವೀಟಿಸಿ ಬಳಿಕ ಅಳಿಸಿ ಹಾಕಿದ ಟ್ರಂಪ್ ಪುತ್ರಿ

ವಾಷಿಂಗ್ಟನ್: ಅಮೆರಿಕದ ಸಂಸತ್ತಿಗೆ ಬುಧವಾರ ನುಗ್ಗಿದ್ದ ಜನಸಮೂಹವನ್ನು “ಅಮೆರಿಕದ ದೇಶಪ್ರೇಮಿಗಳು’’ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್, ಆ ನಂತರ ಟ್ವೀಟನ್ನು ಅಳಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಟ್ವೀಟ್ ಗೆ ಖಂಡನೆ ವ್ಯಕ್ತವಾಗುತ್ತಿದ್ದಂತೆ ಇವಾಂಕಾ ಟ್ವೀಟನ್ನು ಅಳಿಸಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಸ್ಟ್ರೀನ್ ಶಾಟ್ ಗಳು ಹರಿದಾಡುತ್ತಿರುವುದನ್ನು ಮಾತ್ರ ತಡೆಯಲು ಸಾಧ್ಯವಾಗಲಿಲ್ಲ.
ಅಧ್ಯಕ್ಷ ಟ್ರಂಪ್ ಅವರ ಬೆಂಬಲಿಗರ ದೊಡ್ಡ ಗುಂಪು ಬುಧವಾರ ಸಂಜೆ ವಾಷಿಂಗ್ಟನ್ ನಲ್ಲಿ ಸಂಸತ್ ಭವನದ ಮೇಲೆ ನುಗ್ಗಿದ ಬಳಿಕ ನಡದಿರುವ ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದರು.
“ಸ್ಪಷ್ಟಪಡಿಸಿ…ಈ ಜನರನ್ನು ದೇಶಭಕ್ತರು ಎಂದು ನೀವು ಹೇಳುತ್ತೀರಾ? ಎಂದು ಸಿಎನ್ ಎನ್ ವರದಿಗಾರರೊಬ್ಬರು ಸ್ಕ್ಕೀನ್ ಶಾಟ್ ನೊಂದಿಗೆ ಇವಾಂಕಾಗೆ ಪ್ರಶ್ನಿಸಿದ್ದಾರೆ. ಇವಾಂಕಾ ಟ್ರಂಪ್ ಇದಕ್ಕೆ ಪ್ರತಿಕ್ರಿಯಿಸಿದ್ದು, “ಇಲ್ಲ, ಶಾಂತಿಯುತ ಪ್ರತಿಭಟನೆಯು ದೇಶಭಕ್ತಿಯಾಗಿದೆ. ಹಿಂಸಾಚಾರವು ಸ್ವೀಕಾರಾರ್ಹವಲ್ಲ ಹಾಗೂ ಅದನ್ನು ಪ್ರಬಲವಾಗಿ ಖಂಡಿಸಬೇಕು’’ ಎಂದರು.
ಶಾಂತಿಯುತವಾಗಿರಿ ಎಂದು ವಿನಂತಿಸುವ ತನ್ನ ತಂದೆಯ ಟ್ವೀಟನ್ನು ರೀ ಟ್ವೀಟ್ ಮಾಡುವಾಗ ಇವಾಂಕಾ ವಿವಾದಾತ್ಮಕ ಟ್ವೀಟನ್ನು ಪೋಸ್ಟ್ ಮಾಡಿದ್ದರು.
“ಅಮೆರಿಕದ ದೇಶಪ್ರೇಮಿಗಳೇ-ನಮ್ಮ ಕಾನೂನು ಪಾಲನೆಗೆ ಯಾವುದೇ ರೀತಿಯ ಭದ್ರತಾ ಉಲ್ಲಂಘನೆ ಅಥವಾ ಅಗೌರವ ಸ್ವೀಕಾರಾರ್ಹವಲ್ಲ. ಹಿಂಸಾಚಾರ ನಿಲ್ಲಬೇಕು’’ ಎಂದು ಇವಾಂಕಾ ಟ್ವೀಟಿಸಿದ್ದರು.







