ಜಗನ್ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದನ್ನು ಪ್ರೋತ್ಸಾಹಿಸುತ್ತಿದ್ದಾರೆ: ಚಂದ್ರಬಾಬು ನಾಯ್ಡು ಆರೋಪ
ಹಿಂದುತ್ವ ಪರ ನಿಲುವು ಪ್ರಕಟಿಸಲು ಪ್ರಾರಂಭಿಸಿದ ನಾಯ್ಡು

ಹೈದರಾಬಾದ್,ಜ.07: ಆಂಧ್ರ ಪ್ರದೇಶದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಶ್ರಮಿಸುತ್ತಿರುವ ಎನ್ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮೊತ್ತ ಮೊದಲ ಬಾರಿಗೆ ಹಿಂದುತ್ವ ಪರ ನಿಲುವನ್ನು ತಳೆದಿದೆ. ಇದಕ್ಕೆ ಪುರಾವೆಯೆಂಬಂತೆ ಮಂಗಳವಾರ ಮಂಗಳಗಿರಿಯಲ್ಲಿ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ನಾಯ್ಡು, ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗಳನ್ನು ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
"ಸಂವಿಧಾನವನ್ನು ಉಲ್ಲಂಘಿಸಿ, ಕ್ರೈಸ್ತ ಪ್ಯಾಸ್ಟರ್‍ಗಳಿಗೆ ಮಾಸಿಕ ರೂ 5,000 ಸಂಭಾವನೆ ನೀಡಲಾಗುತ್ತಿದೆ. ಚರ್ಚುಗಳು ಮತ ಬ್ಯಾಂಕ್ ರಾಜಕಾರಣದ ಕೇಂದ್ರಬಿಂದುಗಳಾಗಿವೆ" ಎಂದು ಅವರು ದೂರಿದ್ದಾರೆ.
"ಕ್ರಿಸ್ಮಸ್ ಆಚರಣೆಗಳು ಪೊಲೀಸ್ ಠಾಣೆಯಲ್ಲಿ ನಡೆಯುತ್ತಿವೆ. ಉಪಮುಖ್ಯಮಂತ್ರಿಯೊಬ್ಬರು ವೆಂಕಟೇಶ್ವರನ ಸನ್ನಿಧಿಯಲ್ಲಿ ಕ್ರಿಸ್ಮಸ್ ಶುಭಾಶಯ ಹೇಳಿದ್ದಾರೆ. ಕ್ರೈಸ್ತರಿಗೆ ಮಾತ್ರ ಧಾರ್ಮಿಕ ಭಾವನೆಗಳಿವೆಯೇ? ಹಿಂದುಗಳು ಮತ್ತು ಮುಸ್ಲಿಮರಿಗೆ ಧಾರ್ಮಿಕ ಭಾವನೆಗಳಿಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ವಿಜಿಯನಗರಂ ಎಂಬಲ್ಲಿ ರಾಮತೀರ್ಥಂ ದೇವಳದಲ್ಲಿ ವಿಗ್ರಹಗಳ ಹಾನಿ ಘಟನೆಯ ಸಿಬಿಐ ಮತ್ತು ನ್ಯಾಯಾಂಗ ತನಿಖೆಗೆ ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಹಿಂದು ದೇವರುಗಳ ವಿಗ್ರಹಗಳಿಗೆ ಹಾನಿಯೆಸಗಿದ ಹಲವು ಘಟನೆಗಳು ವರದಿಯಾಗಿರುವ ಬೆನ್ನಲ್ಲಿ ನಾಯ್ಡು ಅವರ ಈ ಆರೋಪ ಬಂದಿದೆ. ವಿಪಕ್ಷಗಳು ಈ ಘಟನೆಗಳಿಗೆ ಸರಕಾರವನ್ನು ದೂರಿದ್ದರೆ ಸರಕಾರ ವಿಪಕ್ಷ ನಾಯಕರುಗಳ ಮೇಲೆ ಆರೋಪ ಹೊರಿಸಿದೆ. ಇದನ್ನು ʼಹೊಸ ಯುಗದ ಅಪರಾಧಗಳು' ಎಂದೂ ಸಿಎಂ ರೆಡ್ಡಿ ಬಣ್ಣಿಸಿದ್ದಾರೆ.







