1ರಿಂದ 9ನೇ ತರಗತಿಗೆ ಪಠ್ಯ ಕಡಿತ ಮಾಡದಿರುವ ಸರಕಾರದ ತೀರ್ಮಾನ ಸ್ವಾಗತಾರ್ಹ: ನಿರಂಜನಾರಾಧ್ಯ

ಬೆಂಗಳೂರು, ಜ.7: ಒಂದರಿಂದ ಒಂಬತ್ತನೇ ತರಗತಿಗಳಿಗೆ ಪಠ್ಯಗಳಲ್ಲಿ ಯಾವುದೇ ಕಡಿತ ಮಾಡದಿರಲು ಹಾಗೂ ಪಠ್ಯವನ್ನು ಸಂಪೂರ್ಣವಾಗಿ ಕಲಿಸಿಕೊಡುವ ನಿಟ್ಟಿನಲ್ಲಿ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ರೂಪಿಸಲು ಚಿಂತನೆ ನಡೆಸಿರುವ ರಾಜ್ಯ ಸರಕಾರ ತೀರ್ಮಾನ ಸ್ವಾಗತಾರ್ಹವೆಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರಕಾರದ ಈ ನಿರ್ಧಾರವನ್ನು ಮಕ್ಕಳ ನಡೆ- ಶಾಲೆಯ ಕಡೆ ಅಭಿಯಾನದ ಪರವಾಗಿ ಸ್ವಾಗತಿಸುತ್ತೇನೆ. ಮಕ್ಕಳು ಈಗಾಗಲೇ 9 ತಿಂಗಳು ಕಲಿಕೆಯಿಂದ ವಂಚಿತರಾಗಿ ಹಲವನ್ನು ಮರೆತಿರುವ ಸಾಧ್ಯತೆಗಳಿರುವಾಗ, ಪಠ್ಯಗಳನ್ನು ಕಡಿತ ಮಾಡಿ ಮುಂದಿನ ತರಗತಿಗಳಿಗೆ ದೂಡಿದರೆ ಅವರ ಭವಿಷ್ಯಕ್ಕೆ ಇನ್ನಷ್ಟು ಹಾನಿಯೇ ಆಗಲಿದೆ ಎಂದು ಅಭಿಪ್ರಾಯಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಪ್ರತಿಯೊಂದು ಮಗುವು ಆಯಾ ತರಗತಿಯಲ್ಲಿ ನಿಗದಿತ ಕಲಿಕಾ ಮಟ್ಟವನ್ನು ಮುಟ್ಟುವುದು ನ್ಯಾಯಸಮ್ಮತ ಹಕ್ಕಿನ ಭಾಗವಾಗಿರುತ್ತದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಪ್ರಾಧಿಕಾರವಾದ ಡಿಎಸ್‍ಇಆರ್‍ಟಿ ಸೂಕ್ತ ಬದಲಾವಣೆ ಮಾಡಿ ಪ್ರಕಟಿಸಿದೆ. ಆದ್ದರಿಂದ, ಶೈಕ್ಷಣಿಕ ವರ್ಷವನ್ನು ವಿಸ್ತರಿಸಿ ಎಲ್ಲಾ ಪಾಠಗಳನ್ನು ಕಲಿಸುವುದೇ ಸರಿಯಾದ ನಿರ್ಧಾರವಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ರಾಜ್ಯ ಸರಕಾರದ ಈ ನಿರ್ಧಾರವನ್ನು ಎಲ್ಲ ಶಿಕ್ಷಕರು ಮುಕ್ತವಾಗಿ ಸ್ವೀಕರಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ. ಹೀಗಾಗಿ ಈ ಕ್ರಮವನ್ನು ಕೈಗೊಂಡದ್ದಕ್ಕಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಲಾಗುವುದೆಂದು ಅವರು ತಿಳಿಸಿದ್ದಾರೆ.







