ಸೈಬರ್ ಅಪರಾಧ ಕೃತ್ಯಗಳ ಸವಾಲು ಎದುರಿಸಲು ಇಲಾಖೆ ಸಜ್ಜುಗೊಳಿಸಲು ಕ್ರಮ: ಸಿಎಂ ಯಡಿಯೂರಪ್ಪ

ಬೆಂಗಳೂರು, ಜ. 7: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬದಲಾದಂತೆ ಎದುರಾಗಿರುವ ಸೈಬರ್ ಅಪರಾಧ ಕೃತ್ಯಗಳ ಸವಾಲನ್ನು ಸಮರ್ಥವಾಗಿ ಹೆದರಿಸುವ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರಪತಿಗಳ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದ ಎಂಟು ವಿಭಾಗಗಳಲ್ಲೂ ಸೈಬರ್ ಮತ್ತು ನಾರ್ಕೋಟಿಕ್ ಅಪರಾಧಗಳ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಜೊತೆ ಆರ್ಥಿಕ ಅಪರಾಧ ಠಾಣೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಸೈಬರ್ ಅಪರಾಧಗಳು ಸೇರಿದಂತೆ ಆಧುನಿಕ ಅಪರಾಧ ಕೃತ್ಯಗಳನ್ನು ನಿಯಂತ್ರಣ ಮತ್ತು ಪತ್ತೆ ಹಚ್ಚಲು ಅನುಕೂಲವಾಗುವಂತೆ ಈಗಾಗಲೇ ಸುಸಜ್ಜಿತ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ ಎಂದ ಅವರು, ಅಪರಾಧಿಗಳನ್ನು ಕಂಡು ಹಿಡಿಯುವುದು, ಅಪರಾಧ ತಡೆಯವಲ್ಲಿ ಪೊಲೀಸರ ಶ್ರಮ ರಹಿತ ದುಡಿಮೆ ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಪೊಲೀಸರ ಅಪ್ರತಿಮ ಸೇವೆ ಗುರುತಿಸಿ ರಾಷ್ಟ್ರಪತಿ ಪದಕ ನೀಡಲಾಗುತ್ತಿದೆ. ನಮ್ಮದು ರಾಷ್ಟ್ರದಲ್ಲೇ ಉತ್ತಮ ಪೊಲೀಸ್ ವ್ಯವಸ್ಥೆ ಎಂಬ ಹೆಸರು ಪಡೆದಿದೆ. ಹಲವು ಸೂಕ್ಷ್ಮ ಪ್ರಕರಣಗಳನ್ನು ಭೇದಿಸಿದೆ, ನ್ಯಾಯ ಎತ್ತಿಹಿಡಿಯಲಾಗಿದೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸಲಾಗಿದೆ. ಅಮಾಯಕರಿಗೆ ರಕ್ಷಣೆ ನೀಡಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಜ.15 ಮತ್ತು 16ರಂದು ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಪೊಲೀಸರಿಗೆ 2025ರ ವಸತಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದ ಅವರು, ಪೋಲೀಸರ ಅತ್ಯುತ್ತಮ ಸೇವೆಯ ಮೂಲಕ ಹಲವಾರು ಬಾರಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮುಂದಿನ ದಿನಗಳಲ್ಲೂ ಮತ್ತಷ್ಟು ನಿಸ್ವಾರ್ಥ ಸೇವೆಯಿಂದ ಇನ್ನಷ್ಟು ಹೆಸರು ಗಳಿಸಲಿ ಎಂದು ಕೋರಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕ ಪೊಲೀಸರು ದಕ್ಷತೆ, ನಿರ್ಭಯ, ನಿಷ್ಠುರತೆ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಾಮಾಜಿಕ ಜವಾಬ್ದಾರಿ ಹೊಣೆಗಾರಿಕೆ ಮತ್ತು ಭದ್ರತೆ ವಿಷಯದಲ್ಲಿ ಜವಾಬ್ದಾರಿಯಿಂದ ನಡೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಷಮತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಲಿ ಎಂದು ಅವರನ್ನು ಗುರುತಿಸಲಾಗಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಪತ್ತೆಯಾದ ಮಾದಕ ವಸ್ತು ಪ್ರಕರಣಗಳಷ್ಟೇ ಪ್ರಕರಣಗಳನ್ನು, ಕಳೆದ 10 ತಿಂಗಳಲ್ಲಿ ಪತ್ತೆ ಮಾಡಲಾಗಿದೆ. ಮಾದಕ ವಸ್ತುವಿನ ವಿರುದ್ಧದ ನಮ್ಮ ಹೋರಾಟ ನಿರ್ಣಾಯಕವಾಗಿದೆ. ಕಾರ್ಯಚರಣೆ ಮುಂದುವರೆದಿದೆ ಎಂದರು.
ಆದರ್ಶಪ್ರಾಯ: ರಾಜ್ಯಪಾಲ ವಜೂಭಾಯಿ ವಾಲಾ ಮಾತನಾಡಿ, ಸಮಾಜಕ್ಕಾಗಿ ಆದರ್ಶಪ್ರಾಯ ಸೇವೆಯನ್ನು ಸಲ್ಲಿಸಿದ ವ್ಯಕ್ತಿಗಳನ್ನು ಗೌರವಿಸುವುದು ಹೆಮ್ಮೆಯ ಸಂಗತಿ. ಅವರ ಕೊಡುಗೆ ಸಮಾಜದ ಸುಧಾರಣೆ ಮತ್ತು ಕಲ್ಯಾಣಕ್ಕಾಗಿ ಉತ್ಸಾಹದಿಂದ ಕೆಲಸ ಮಾಡಲು ಇತರರಿಗೆ ಪ್ರೇರಣೆ ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಹಾಗೂ ಪ್ರಶಂಸನೀಯ ಸೇವೆ ಸಲ್ಲಿಸಿದ 74 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೊಲೀಸ್ ಪದಕ ನೀಡಿ ಗೌರವಿಸಲಾಯಿತು. ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ರಾಜ್ಯದಲ್ಲಿ ಶಾಂತಿ ಕಾಪಾಡುವುದು ಪೊಲೀಸರ ಜವಾಬ್ದಾರಿ. ಅವರು ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದು, ಒಬ್ಬ ಸಾಮಾನ್ಯ ವ್ಯಕ್ತಿಯು ಪೊಲೀಸರನ್ನು ನೋಡಿದಾಗ ಸುರಕ್ಷಿತ ಭಾವನೆಯು ಅವರಲ್ಲಿ ಮೂಡಬೇಕು'
-ವಜೂಭಾಯಿ ವಾಲಾ, ರಾಜ್ಯಪಾಲ







