ಆಡಳಿತದಲ್ಲಿ ಪಾರದರ್ಶಕತೆ ತರಲು ಧಾರ್ಮಿಕ ದತ್ತಿ ಇಲಾಖೆಯಲ್ಲಿ ‘ಇ-ಆಫೀಸ್ ತಂತ್ರಾಂಶ': ಯಡಿಯೂರಪ್ಪ
ರಾಜ್ಯಮಟ್ಟದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರ ಪ್ರಶಿಕ್ಷಣ ಕಾರ್ಯಾಗಾರ

ಬೆಂಗಳೂರು, ಜ. 7: ‘ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ತ್ವರಿತಗತಿಯಲ್ಲಿ ಕಡತಗಳ ವಿಲೇವಾರಿಗಾಗಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ‘ಇ-ಆಫೀಸ್ ತಂತ್ರಾಂಶ'ವನ್ನು ಜಾರಿಗೆ ತರಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರ ಪ್ರಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮತ್ತು ‘ಗುಡಿ’ ಮಾಸಪತ್ರಿಕೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ದೇವಸ್ಥಾನದಲ್ಲಿ ಆದ್ಯತೆ ಮೇಲೆ ಪೂಜೆ, ಪ್ರತ್ಯೇಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.
ರಾಜ್ಯದಿಂದ ತಿರುಪತಿ ತಿರುಮಲ, ಮಂತ್ರಾಲಯ, ಶ್ರೀಶೈಲಂ ಮತ್ತು ಉತ್ತರ ಪ್ರದೇಶದ ವಾರಣಾಸಿಗೆ ಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ವಸತಿ ಸೌಕರ್ಯ ಮಾಡಲಾಗಿದೆ ಎಂದ ಅವರು, ರಾಜ್ಯದಿಂದ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ತಲಾ 30 ಸಾವಿರ ರೂ. ಮತ್ತು ಜಾರ್‍ಧಾಮ್ ಯಾತ್ರೆ ಕೈಗೊಳ್ಳುವವರಿಗೆ ತಲಾ 20 ಸಾವಿರ ರೂ.ಸಹಾಯಧನ ನೀಡಲಾಗುತ್ತಿದೆ ಎಂದರು.
ಮುಜರಾಯಿ ಇಲಾಖೆಯಡಿ ರಾಜ್ಯದ ದೇವಾಲಯಗಳ ಐತಿಹಾಸಿಕ ಪರಂಪರೆ, ಇತಿಹಾಸ, ಪೂಜಾ ಪದ್ಧತಿಗಳನ್ನು ಹಾಗೂ ಸರಕಾರದ ಕಾರ್ಯ ಚಟುವಟಿಕೆಗಳನ್ನು ಭಕ್ತಾಧಿಗಳಿಗೆ ಪರಿಚಯಿಸಲು ‘ಗುಡಿ’ ಮಾಸಪತ್ರಿಕೆಯನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ’ ಎಂದು ಯಡಿಯೂರಪ್ಪ ತಿಳಿಸಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದ ಜನರ ಭಾವನೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧಿಯಿಂದ ಹಿಡಿದು ಎಲ್ಲ ರೈತರು ಬಯಸಿದಂತೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಜಾರಿಗೆ ತಂದ ಕೀರ್ತಿ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಸ್ಥಾನ ಸ್ವಚ್ಛವಾಗಿಟ್ಟುಕೊಳ್ಳಿ: ರಾಜ್ಯದಲ್ಲಿನ ದೇವಸ್ಥಾನ ಶುದ್ಧವಾಗಿರಬೇಕು. ಅಂತರಂಗ-ಬಹಿರಂಗ ಶುದ್ದಿಯಾಗಿರಬೇಕು. ಅಂತರಂಗ ಶುದ್ದಿಗೆ ತಪಸ್ಸು, ಧ್ಯಾನಬೇಕಾಗುತ್ತದೆ. ಕ್ಷೇತ್ರಕ್ಕೆ ಬಂದಾಗ ಬಹಿರಂಗ ಶುದ್ದಿಗೆ ಅವಕಾಶ ಬೇಕಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಲಹೆ ಮಾಡಿದರು.
‘ಸಿಬ್ಬಂದಿಗೆ ತರಬೇತಿ ಅಗತ್ಯ. ಅವರವರ ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕು. ಕ್ಷೇತ್ರಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು. ಅಭಯ ದಾನ ಮಾಡಬೇಕು ಎಂಬ ಸಂದೇಶ ಇದೆ. ನಾವು ಸದಾ ಎಚ್ಚರಿಕೆಯಿಂದ ಇರಬೇಕು. ನಿಮ್ಮ ನಿಮ್ಮ ದೇವಾಲಯಗಳಲ್ಲಿ ಕೆಲವು ಪದ್ದತಿಗಳು ಇರಬಹುದು. ಆ ಪದ್ಧತಿಯನ್ನು ಕಾಪಾಡಬೇಕು ಎಂದು ಅವರು ಸೂಚಿಸಿದರು.
ರಾಜ್ಯದಲ್ಲಿರುವ ದೇವಾಲಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೆಚ್ಚಿನ ಅನುಕೂಲ ಕಲ್ಪಿಸಿದ್ದಾರೆ. ದೇವಾಲಯಗಳ ಜೀರ್ಣೋದ್ಧಾರಗೊಂಡಿವೆ. ನಮ್ಮ ದೇಶದಲ್ಲಿ ಧರ್ಮವನ್ನ ಬಿಟ್ಟರೆ ಬೇರೆ ಯಾವುದೇ ಶಕ್ತಿ ಇಲ್ಲ. ದೇವಾಲಯಗಳನ್ನು ನೋಡಲು ವಿದೇಶದಿಂದ ಬರುತ್ತಾರೆ ಎಂದು ಅವರು ಹೇಳಿದರು.
ರಕ್ಷಣೆ ಅಗತ್ಯ: ಆರ್ಟ್ ಆಫ್ ಲಿವಿಂಗ್‍ನ ರವಿಶಂಕರ್ ಗುರೂಜಿ ಮಾತನಾಡಿ, ಧರ್ಮ ರಕ್ಷಣೆ ಮಾಡಲೇಬೇಕು. ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕ ಸೇವೆ ಮಾಡಬೇಕು. ಧಾರ್ಮಿಕ ಕೇಂದ್ರಗಳು ಸಾಂಸ್ಕೃತಿಕ ಕೇಂದ್ರಗಳೂ ಆಗಿವೆ. ದೇವಸ್ಥಾನವು ಮಾನಸಿಕ ನೆಮ್ಮದಿ ನೀಡುವ ಕೇಂದ್ರಗಳಾಗಬೇಕು ಎಂದರು.
ದೇವಳಗಳ ಅರ್ಚಕರು ಸ್ವಚ್ಛವಾಗಿರಬೇಕು. ಜತೆಗೆ ದೇವಾಲಯದ ಸ್ವಚ್ಚತೆಗೆ ಒತ್ತು ನೀಡಬೇಕು. ಅಲ್ಲದೆ, ಅಭಿಷೇಕಕ್ಕೆ ಬಳಕೆ ಮಾಡುವ ಹಾಲು ತುಪ್ಪವನ್ನು ಚರಂಡಿಗೆ ಬಿಡದೆ ಅದನ್ನು ಬಡ ಮಕ್ಕಳಿಗೆ ನೀಡುವಂತೆ ಆಗಬೇಕು. ದೇವರಿಗೆ ಹಾಕುವ ಹೂವುಗಳನ್ನು ಗೊಬ್ಬರಕ್ಕೆ ಬಳಕೆ ಮಾಡುವಂತಾಗಬೇಕು. ಕನ್ನಡದಲ್ಲಿ ಪೂಜೆ ನಡೆಯುವ ಪ್ರಕ್ರಿಯೆ ಒಳ್ಳೆಯದು ಎಂದು ಗುರೂಜಿ ಹೇಳಿದರು.
ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಆನಂದ ಗುರೂಜಿ, ರಾಜ್ಯ ಧಾಮಿಕ ಪರಿಷತ್ ಉಪಾಧ್ಯಕ್ಷ ಮಹೇಂದ್ರ ಜೈನ್, ಪರಿಷತ್ತಿನ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ, ನಿವೃತ್ತ ನ್ಯಾಯಾಧೀಶ ಮಹಿಪಾಲ್ ದೇಸಾಯಿ ಸೇರಿದಂತೆ ಇನ್ನಿತರರು ಹಾಜರಿದ್ದರು.






.jpg)

