‘ಕೃಷಿ ಸಂಜೀವಿನಿ' ವಾಹನಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ
40 ವಾಹನಗಳನ್ನು ಲೋಕಾರ್ಪಣೆ

ಬೆಂಗಳೂರು, ಜ. 7: ಬೆಳೆಗಳಿಗೆ ಕಾಡುವ ರೋಗ, ಕೀಟಬಾಧೆ ಹತೋಟಿ, ಮಣ್ಣಿನ ಪೋಷಕಾಂಶ ಸೇರಿದಂತೆ ಕೃಷಿ ಬೆಳೆಗಳ ಸುಧಾರಣೆ ಹಾಗೂ ಕೃಷಿಕರಿಗೆ ನೆರವಾಗಲು ‘ಕೃಷಿ ಸಂಜೀವಿನಿ’ ಸಂಚಾರಿ ವಾಹನಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಲೋಕಾರ್ಪಣೆ ಮಾಡಿದರು.
ಗುರುವಾರ ವಿಧಾನಸೌಧದ ವೈಭವೋಪೇತ ಮೆಟ್ಟಿಲುಗಳ ಬಳಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡಿದ ಅವರು, ‘ರೈತರ ಹೊಲಗಳಿಗೆ ಹೋಗಿ ಮಣ್ಣು, ನೀರು, ರೋಗ ಪರೀಕ್ಷೆ ಮಾಡುವ ವಾಹನವಿದು. 40 ವಾಹನಗಳನ್ನು ಲೋಕಾರ್ಪಣೆ ಮಾಡಿದ್ದು, ಇವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ‘ಕೃಷಿ ಸಂಜೀವಿನಿ' 40 ವಾಹನಗಳನ್ನು ಸಿಎಂ ಲೋಕಾರ್ಪಣೆ ಮಾಡಿದ್ದು, ಪ್ರ್ರತಿಯೊಂದು ರೈತ ಸಂಪರ್ಕ ಕೇಂದ್ರಕ್ಕೂ ಒಂದೊಂದು ಕೃಷಿ ಸಂಜೀವಿನಿ ವಾಹನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಹೇಳಿದರು.
ಕೃಷಿ ಸಂಜೀವಿನಿ ವಾಹನಕ್ಕೆ ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಮಾದರಿಯಲ್ಲಿ ಸೈರನ್ ಅಳವಡಿಸಲಾಗಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಹಕಾರ ಸಚಿವ ಎಸ್.ಟಿ.ಸೋಮಶೇರ್, ಶಾಸಕ ಬೈಯ್ಯಾರೆಡ್ಡಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಈ ವೇಳೆ ಹಾಜರಿದ್ದರು.
‘ಬೆಳೆಗಳಿಗೆ ಕಾಡುವ ಕೀಟ, ರೋಗ, ಕಳೆಬಾಧೆ ಹಾಗೂ ಮಣ್ಣಿನ ಪೋಷಕಾಂಶ ಕೊರತೆ ಹಾಗೂ ನಿರ್ವಹಣೆ ಕುರಿತಂತೆ ರೈತರ ಹೊಲಗಳ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯಗಳನ್ನು ಒದಗಿಸಲು ‘ಕೃಷಿ ಸಂಜೀವಿನಿ’ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಕೃಷಿ ಸಂಜೀವಿನಿ ಟೋಲ್ ಫ್ರೀ ಸಂಖ್ಯೆ 155313ಕ್ಕೆ ಕರೆ ಮಾಡಿದರೆ ರೈತರಿರುವ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕರೆ ಹೋಗುತ್ತದೆ. ಆಗ ರೈತರು ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಪಡೆಯಬಹುದು'






.jpg)
.jpg)

