ಒಂದೇ ಮಂಟಪದಲ್ಲಿ ಇಬ್ಬರು ಯುವತಿಯರನ್ನು ವಿವಾಹವಾದ ಛತ್ತೀಸಗಢದ ರೈತ
"ನಾವಿಬ್ಬರೂ ಸಂತೋಷವಾಗಿದ್ದೇವೆ" ಎಂದ ಯುವತಿಯರು

photo/hindustantimes.com
ರಾಯಪುರ್,ಜ.7: ಛತ್ತೀಸಗಢದ ನಕ್ಸಲ್ ಪೀಡಿತ ಬಸ್ತರ್ ಜಿಲ್ಲೆಯ ರೈತ, 24 ವರ್ಷದ ಚಂದು ಮೌರ್ಯ ಜನವರಿ 5ರಂದು ಸುಮಾರು 500 ಮಂದಿ ಹಿತೈಷಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಒಂದೇ ಮಂಟಪದಲ್ಲಿ ಇಬ್ಬರು ಯುವತಿಯರನ್ನು ವಿವಾಹವಾಗಿದ್ದಾನೆ. ಚಂದುವಿನ ವಿವಾಹ ಸಮಾರಂಭದ ವೀಡಿಯೋ ಹಾಗೂ ಆಹ್ವಾನ ಪತ್ರಿಕೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕುರಿತು hindustantimes.com ವರದಿ ಮಾಡಿದೆ.
ಮೂರು ವರ್ಷಗಳ ಹಿಂದೆ ಚಂದು ಹತ್ತಿರದ ತೋಕಪಲ್ ಪ್ರದೇಶಕ್ಕೆ ಯಾವುದೋ ಕೆಲಸಕ್ಕೆ ಹೋಗಿದ್ದ ಸಂದರ್ಭ ಅಲ್ಲಿ 21 ವರ್ಷದ ಆದಿವಾಸಿ ಯುವತಿ ಸುಂದರಿ ಕಷ್ಯಪ್ ಎಂಬಾಕೆಯ ಆಕರ್ಷಣೆಗೊಳಗಾಗಿದ್ದ ಎನ್ನಲಾಗಿದೆ. ಅಂದಿನಿಂದ ಅವರಿಬ್ಬರೂ ಫೋನ್ ಮೂಲಕ ಸಂಪರ್ಕದಲ್ಲಿದ್ದರಲ್ಲದೆ ವಿವಾಹವಾಗಲು ನಿರ್ಧರಿಸಿದ್ದರು ಎನ್ನಲಾಗಿದೆ.
ಒಂದು ವರ್ಷದ ಬಳಿಕ 20 ವರ್ಷದ ಹಸೀನಾ ಬಘೇಲ್ ಎಂಬಾಕೆ ಚಂದುವಿನ ಗ್ರಾಮ ತಿಕ್ರಲೋನಗರ ಎಂಬಲ್ಲಿಗೆ ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಳು, ಆಕೆ ಚಂದುವನ್ನು ನೋಡಿ ಆತನನ್ನು ಪ್ರೇಮಿಸಲು ಆರಂಭಿಸಿದಾಗ ತಾನು ಈಗಾಗಲೇ ಇನ್ನೊಬ್ಬಳನ್ನು ಪ್ರೀತಿಸುತ್ತಿರುವುದಾಗಿ ಆತ ತಿಳಿಸಿದ್ದ, ಆದರೂ ಫೋನ್ ಮೂಲಕ ಸಂಪರ್ಕದಲ್ಲಿರುವ ಎಂದು ಆಕೆ ಹೇಳಿದ್ದಳು.
ಮುಂದೆ ಹಸೀನಾ ಮತ್ತು ಸುಂದರಿ ಒಬ್ಬರಿಗೊಬ್ಬರು ಪರಿಚಯವಾಗಿ ಇಬ್ಬರೂ, ಚಂದು ಜತೆ ಬಾಳಲು ನಿರ್ಧರಿಸಿದ್ದರು. ಅನಿರೀಕ್ಷಿತವಾಗಿ ಹಸೀನಾ ನೇರವಾಗಿ ಚಂದು ಮನೆಗೆ ಬಂದು ಆತನ ಜತೆ ಜೀವನ ನಡೆಸಲು ಆರಂಭಿಸಿದ್ದು, ಇದನ್ನು ತಿಳಿದು ಸುಂದರಿ ಕೂಡ ಅಲ್ಲಿಗೆ ನೇರವಾಗಿ ಆಗಮಿಸಿದ್ದಳು ಹಾಗೂ ಮೂವರು ಜತೆಯಾಗಿ ವಾಸಿಸಲಾರಂಭಿಸಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಈ ಲಿವ್-ಇನ್ ಸಂಬಂಧವನ್ನು ಪ್ರಶ್ನಿಸಿದ ನಂತರ ಚಂದು ಇಬ್ಬರನ್ನೂ ವಿವಾಹವಾಗಲು ನಿರ್ಧರಿಸಿದ್ದ. ವಿವಾಹ ಸಮಾರಂಭಕ್ಕೆ ಹಸೀನಾ ಕುಟುಂಬಸ್ಥರು ಆಗಮಿಸಿದ್ದರೆ ಸುಂದರಿ ಕುಟುಂಬದವರ್ಯಾರೂ ಆಗಮಿಸಿರಲಿಲ್ಲ. "ನಾವಿಬ್ಬರೂ ಸಂತೋಷವಾಗಿದ್ದೇವೆ" ಎಂದು ಯುವತಿಯರು ಹೇಳಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.







