ಜೆಡಿಎಸ್ ಗೆ ಹೊಸ ರೂಪ ನೀಡಲು ಪಕ್ಷದ ಎಲ್ಲಾ ಘಟಕಗಳ ವಿಸರ್ಜನೆ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜ. 7: ಇತ್ತೀಚೆಗೆ ಪ್ರಕಟಿಸಲಾದ ಜೆಡಿಎಸ್ ಯುವಘಟಕ, ಇತರೆ ವಿಭಾಗಗಳ ಅಧ್ಯಕ್ಷರನ್ನು ಹೊರತುಪಡಿಸಿ ಮಹಿಳಾ ಘಟಕವೂ ಸೇರಿದಂತೆ ಪಕ್ಷದ ಇತರೆ ಎಲ್ಲ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಸಂಘಟನಾ ಸಭೆಗಳನ್ನು ನಡೆಸಿದ ಅವರು, ಜ.14ರ ಸಂಕ್ರಾಂತಿ ಹಬ್ಬದ ವೇಳೆಗೆ ಪಕ್ಷದ ಎಂಟು-ಹತ್ತು ಮಂದಿ ಹಿರಿಯ ಮುಖಂಡರನ್ನೊಳಗೊಂಡ ಕೋರ್ ಕಮಿಟಿಯನ್ನು ರಚನೆ ಮಾಡಲಾಗುವುದು. ನಾನಾಗಲಿ ಅಥವಾ ಜೆಡಿಎಸ್ ವರಿಷ್ಠ ದೇವೇಗೌಡ ಅವರಾಗಲಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಕೋರ್ ಕಮಿಟಿ ಸಭೆಗೆ ಬಾರದೆ ನೀವೇ ತೀರ್ಮಾನ ಕೈಗೊಳ್ಳಲಿ ಎನ್ನುವಂತಿಲ್ಲ. ಕಡ್ಡಾಯವಾಗಿ ಕೋರ್ ಕಮಿಟಿ ಸದಸ್ಯರು ಎಲ್ಲರೂ ಸಭೆಗೆ ಬರಲೇಬೇಕು. ಒಂದೆರಡು ಸಭೆಗಳನ್ನು ಗಮನಿಸಲಾಗುವುದು, ಸಭೆಗೆ ಗೈರಾಗುವ ಸದಸ್ಯರನ್ನು ಯಾವುದೇ ಮುಲಾಜಿಲ್ಲದೆ ತೆಗೆದುಹಾಕಿ ಬೇರೆಯವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕುಮಾರಸ್ವಾಮಿ ಸೂಚಿಸಿದರು.
ತಂಡ ರಚನೆ: ಪಕ್ಷವನ್ನು ಸದೃಢಗೊಳಿಸಲು ವಿಭಾಗವಾರು, ಜಾತಿವಾರು ತಂಡಗಳನ್ನು ರಚನೆ ಮಾಡಲಾಗುತ್ತದೆ. ಜಾತ್ಯತೀತತೆ ಎಂದು ಹೇಳಿದರೂ ಚುನಾವಣೆ ವೇಳೆ ಎಲ್ಲ ಪಕ್ಷಗಳು ಜಾತಿವಾರು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಜಾತಿವಾರು ಯಾರು ಸಕ್ರಿಯವಾಗಿ ಕೆಲಸ ಮಾಡುತ್ತಾರೋ ಅಂತಹವರಿಗೆ ಅವಕಾಶ ನೀಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಗಿರಕಿ ಹೊಡೆದರೆ ಅವಕಾಶ ಇಲ್ಲ: ಬೆಂಗಳೂರಿನಲ್ಲಿ ಮುಖಂಡರ ಸುತ್ತ ತಿರುಗುವವರಿಗೆ ಅವಕಾಶ ನೀಡುವುದಿಲ್ಲ. ಜನರ ಮಧ್ಯೆ ಇದ್ದು ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುವುದು. ಪಕ್ಷದ ನಾಯಕರ ಬಗ್ಗೆ ಅನುಮಾನಗಳಿದ್ದರೆ ಬಹಿರಂಗವಾಗಿ ಹೇಳಿಕೆ ನೀಡುವುದು ಬೇಡ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು ಎಂದು ಕುಮಾರಸ್ವಾಮಿ ಸೂಚನೆ ನೀಡಿದರು.
ಅಧಿಕಾರಕ್ಕೆ ತರಬೇಕು: 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕು. ಆ ನಿಟ್ಟಿನಲ್ಲಿ ಎಲ್ಲ ಮುಖಂಡರು ಹಾಗೂ ಪದಾಧಿಕಾರಿಗಳನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಕಲ್ಪಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಹಾಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ಪಕ್ಷದ ಶಾಸಕರು ಹಾಗೂ ಹಿರಿಯ ಮುಖಂಡರು ಭಾಗವಹಿಸಿದ್ದರು.







