"ಪ್ರಧಾನಿ ಹುದ್ದೆಯನ್ನು ʼಗಳಿಸಿರುವʼ ಮೋದಿಗೆ ಸರ್ಜಿಕಲ್ ಸ್ಟ್ರೈಕ್ ಕುರಿತ ವೈಭವೀಕರಣ ಅಗತ್ಯವಿರಲಿಲ್ಲ"
ಪ್ರಣಬ್ ಮುಖರ್ಜಿ ಆತ್ಮಕತೆಯಲ್ಲಿ ಉಲ್ಲೇಖ

ಹೊಸದಿಲ್ಲಿ,ಜ.07: ಇತ್ತೀಚೆಗೆ ಬಿಡುಗಡೆಯಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆತ್ಮಕಥನದಲ್ಲಿ ಪ್ರಣಬ್ ತಾವು ಪ್ರಧಾನಿ ನರೇಂದ್ರ ಮೋದಿ ಜತೆಗೆ ಹೊಂದಿದ್ದ ʼಸೌಹಾರ್ದ ಸಂಬಂಧʼಗಳನ್ನು ನೆನಪಿಸಿಕೊಂಡಿದ್ದಾರಲ್ಲದೆ, ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ಅನ್ನು ವೈಭವೀಕರಣ ಮಾಡುವ ಅಗತ್ಯವಿರಲಿಲ್ಲ ಎಂದು ಬರೆದಿದ್ದಾಗಿ timesofindia.com ವರದಿ ಮಾಡಿದೆ.
ಮೋದಿ ಅವರು ಪ್ರಧಾನಿ ಹುದ್ದೆಯನ್ನು ತಾವೇ ಗಳಿಸಿದ್ದರೆ, ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ಆಫರ್ ಮಾಡಿದ್ದರು ಎಂದು ಪ್ರಣಬ್ ಆತ್ಮಕಥನದಲ್ಲಿ ಉಲ್ಲೇಖವಾಗಿದೆ.
"ಸೋನಿಯಾ ಗಾಂಧಿ ಅವರು ಪ್ರಧಾನಿಯಾಗಿ ಹೆಸರಿಸಿದ ಮನಮೋಹನ್ ಸಿಂಗ್ ʼಮೂಲತಃ ಒಬ್ಬ ಅರ್ಥಶಾಸ್ತ್ರಜ್ಞʼ ಎಂದು ಸಿಂಗ್ ಅವರನ್ನು ಉಲ್ಲೇಖಿಸುವಾಗ ಪ್ರಣಬ್ ಬರೆದಿದ್ದಾರೆ.
"ಇನ್ನೊಂದೆಡೆ ಬಿಜೆಪಿಯನ್ನು 2014ರಲ್ಲಿ ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿ ಜನರ ಇಚ್ಛೆಯಂತೆ ಮೋದಿ ಪ್ರಧಾನಿಯಾದರು. ಅವರೊಬ್ಬ ಅಪ್ಪಟ ರಾಜಕಾರಣಿ ಹಾಗೂ ಪಕ್ಷ ಪ್ರಚಾರಕ್ಕೆ ಶುರುವಿಟ್ಟುಕೊಳ್ಳುತ್ತಿದ್ದಂತೆಯೇ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಹೆಸರಿಸಿತ್ತು. ಆಗ ಗುಜರಾತ್ ಸಿಎಂ ಆಗಿದ್ದ ಅವರು ಜನಸಾಮಾನ್ಯರಿಗೆ ಬಹಳ ಹತ್ತಿರವಾಗುವಂತಹ ವ್ಯಕ್ತಿತ್ವ ಹೊಂದಿದ್ದು, ಅವರು ಪ್ರಧಾನಿ ಹುದ್ದೆಯನ್ನು ಗಳಿಸಿದರು," ಎಂದು ಪ್ರಣಬ್ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯಲ್ಲಿ ಅನಿರೀಕ್ಷಿತವಾದುದನ್ನು ನಿರೀಕ್ಷಿಸಿದ್ದೆ ಎಂದು ಮುಖರ್ಜಿ ಬರೆದಿದ್ದಾರೆ. "ಅವರು ತಮ್ಮ ಅಚ್ಚರಿಗಳನ್ನು ಮುಂದುವರಿಸಿದ್ದರು, ಡಿಸೆಂಬರ್ 2015ರಲ್ಲಿ ಲಾಹೋರ್‍ಗೆ ಅಚ್ಚರಿಯ ಭೇಟಿ ನೀಡಿ ಆಗಿನ ಪಾಕ್ ಪ್ರಧಾನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು. ಚೀನಾದ ಅಧ್ಯಕ್ಷರ ಜತೆ ಅನೌಪಚಾರಿಕ ಸಭೆಯನ್ನು 2018ರಲ್ಲಿ ಚೀನಾದ ವುಹಾನ್‍ನಲ್ಲಿ ಹಾಗೂ ತೀರಾ ಇತ್ತೀಚೆಗೆ 2019ರಲ್ಲಿ ತಮಿಳುನಾಡಿನ ಮಾಮಲ್ಲಪುರಂನಲ್ಲಿ ನಡೆಸಿದರು. ಆದರೆ ಆಗಿನ ಭಾರತ-ಪಾಕ್ ಸಂಬಂಧಗಳನ್ನು ಪರಿಗಣಿಸಿದಾಗ ಪ್ರಧಾನಿ ಅನಿರೀಕ್ಷಿತವಾಗಿ ಲಾಹೋರ್ ಗೆ ಭೇಟಿ ನೀಡಿದ್ದು ಅನಗತ್ಯವಾಗಿತ್ತು ಎಂದು ನಾನು ಅಂದುಕೊಂಡಿದ್ದೇನೆ,''ಎಂದು ಪ್ರಣಬ್ ಬರೆದಿದ್ದಾಗಿ ವರದಿ ತಿಳಿಸಿದೆ.
"ಭಾರತವು ಪಾಕಿಸ್ತಾನವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು ಹಾಗೂ 2016ರ ಸರ್ಜಿಕಲ್ ದಾಳಿಯ ಕುರಿತಂತೆಯೇ ಅತಿಯಾಗಿ ಮಾತನಾಡಿ ದೇಶ ಹೆಚ್ಚೇನೂ ಗಳಿಸಿಲ್ಲ,'' ಎಂದೂ ಪ್ರಣಬ್ ಬರೆದಿದ್ದಾರೆ.







