ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಕೋವಿಡ್ ಲಸಿಕೆ: ಕೇಂದ್ರ ಆರೋಗ್ಯ ಸಚಿವ

ಹೊಸದಿಲ್ಲಿ, ಜ.7: ದೇಶವು ಕೋವಿಡ್ ಲಸಿಕೆ ಅಭಿಯಾನಕ್ಕೆ ಸಿದ್ಧತೆಗಳ ಅಂತಿಮ ಹಂತದಲ್ಲಿದ್ದು, ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಗುರುವಾರ ಇಲ್ಲಿ ತಿಳಿಸಿದರು. ಲಸಿಕೆ ನೀಡಿಕೆಗಾಗಿ ದೇಶವ್ಯಾಪಿ ಎರಡನೇ ಡ್ರೈ ರನ್ ಕಾರ್ಯಕ್ರಮ ಜ.8ರಂದು ನಡೆಯಲಿದ್ದು,ಮೊದಲನೇ ಡ್ರೈ ರನ್ ನಡೆಸಲಾಗಿದ್ದ ರಾಜ್ಯಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಪೂರೈಕೆಯಾಗಲಿರುವ ಡೋಸ್‌ಗಳ ಪ್ರಮಾಣವನ್ನು ಅವಲಂಬಿಸಿ ಎಲ್ಲರಿಗೂ ಏಕಕಾಲದಲ್ಲಿ ಲಸಿಕೆ ನೀಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಆದ್ಯತೆ ಗುಂಪುಗಳನ್ನು ನಿರ್ಧರಿಸಲಾಗಿದೆ. ಆರೋಗ್ಯ ಕಾರ್ಯಕರ್ತರಿಂದ ಹಿಡಿದು ಮುನ್ಸಿಪಲ್ ನೌಕರರವರೆಗೆ ಮುಂಚೂಣಿಯ ಕೊರೋನ ಕಾರ್ಯಕರ್ತರು ಮೊದಲ ಆದ್ಯತೆಯಾಗಿದ್ದು,ಇಂತಹವರ ಒಟ್ಟು ಸಂಖ್ಯೆ ಮೂರು ಕೋಟಿಯಷ್ಟಿದೆ. ಬಳಿಕ 27 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದ್ದು, 50 ವರ್ಷಕ್ಕಿಂತ ಮೇಲಿನವರು ಮತ್ತು ಮಧುಮೇಹ, ರಕ್ತದೊತ್ತಡ ಹಾಗೂ ಇತರ ದೀರ್ಘಕಾಲಿಕ ಕಾಯಿಲೆಗಳನ್ನು ಹೊಂದಿರುವ 50 ವರ್ಷಕ್ಕಿಂತ ಕೆಳಗಿನವರು ಈ ಗುಂಪಿನಲ್ಲಿ ಸೇರಿದ್ದಾರೆ ಎಂದು ಅವರು ತಿಳಿಸಿದರು.
ತಲಾ ಡೋಸ್‌ಗೆ 200 ರೂ.ಬೆಲೆಯಲ್ಲಿ 10 ಕೋಟಿ ಡೋಸ್‌ಗಳನ್ನು ಖರೀದಿಸಲು ಸರಕಾರವು ಒಪ್ಪಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಆದಾರ್ ಪೂನಾವಾಲಾ ಅವರು ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಕೊನೇಕ್ಷಣದ ಮಾತುಕತೆಗಳ ಬಳಿಕ ಬೆಲೆಯಲ್ಲಿ ಬದಲಾವಣೆಯಾಗಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಾಮೂಹಿಕ ಲಸಿಕೆ ಅಭಿಯಾನವನ್ನು ಆರಂಭಿಸಲು ದಿನಾಂಕವನ್ನು ಸರಕಾರವು ಇನ್ನಷ್ಟೇ ನಿಗದಿಗೊಳಿಸಬೇಕಿದೆ. ಔಷಧಿಗಳ ಮಹಾ ನಿಯಂತ್ರಕರು ತುರ್ತು ಬಳಕೆಗಾಗಿ ಎರಡು ಕೋವಿಡ್ ಲಸಿಕೆಗಳಿಗೆ ರವಿವಾರ ಅನುಮತಿಯನ್ನು ಮಂಜೂರು ಮಾಡಿದ್ದು,ಡ್ರೈರನ್‌ನ ಮರುಮಾಹಿತಿಗಳನ್ನು ಆಧರಿಸಿ 10 ದಿನಗಳಲ್ಲಿ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿತ್ತು.







