ಯಾವುದೇ ಪಕ್ಷದ ಜೊತೆ ಹೊಂದಾಣಿಕೆ-ವಿಲೀನ ಇಲ್ಲ: ಕುಮಾರಸ್ವಾಮಿ ಸ್ಪಷ್ಟನೆ
‘'ಅವಿರತವಾಗಿ ಶ್ರಮಿಸಿದರೆ ಪಕ್ಷ ಅಧಿಕಾರಕ್ಕೆ ತರುವುದು ಕಷ್ಟವಲ್ಲ''

ಬೆಂಗಳೂರು, ಜ. 7: ಮುಂಬರುವ ಚುನಾವಣೆಯಲ್ಲಿ ದೃಷ್ಟಿಯಲ್ಲಿಟ್ಟುಕೊಂಡು 224 ಕ್ಷೇತ್ರಗಳಿಂದ ತಲಾ ಒಬ್ಬೊಬ್ಬ ಸದಸ್ಯರನ್ನೊಳಗೊಂಡ ರಾಜ್ಯ ಸಮಿತಿಯನ್ನು ರಚನೆ ಮಾಡಲಾಗುವುದು. ಜತೆಗೆ ಜಿಲ್ಲಾ ಮತ್ತು ತಾಲೂಕು ಸಮಿತಿಯನ್ನು ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಗುರುವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ತಿಂಗಳಿಗೊಮ್ಮೆ ಸಭೆ ನಡೆಸಿ ವರದಿ ನೀಡಬೇಕು. ಬೆಂಗಳೂರಲ್ಲಿ ವಾರ್ ರೂಂ ಮೂಲಕ ವರದಿ ಪಡೆದುಕೊಳ್ಳಲಾಗುತ್ತದೆ. ಪಕ್ಷ ಸದೃಢವಾಗದಿರುವ ಜಿಲ್ಲೆಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ತರಬೇತಿ ನೀಡಿ ಬೆಳೆಸೋಣ. ಸಾಮಾಜಿಕ ಜಾಲತಾಣವನ್ನು ಮತ್ತಷ್ಟು ಸಕ್ರಿಯಗೊಳಿಸಲಾಗುವುದು. ಮುಂದಿನ ಎರಡೂವರೆ ವರ್ಷ ಅವಿರತವಾಗಿ ಶ್ರಮಿಸಿದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟವಲ್ಲ ಎಂದು ಹೇಳಿದರು.
ಹೊಂದಾಣಿಕೆ ಇಲ್ಲ: ಜೆಡಿಎಸ್ ಯಾವ ಪಕ್ಷದ ಜತೆಯೂ ಹೊಂದಾಣಿಕೆಯಾಗಲಿ, ವಿಲೀನವಾಗಲಿ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ಬಿಜೆಪಿ ಜತೆ ವಿಲೀನವಾಗುತ್ತೇವೆ ಎಂಬುದೆಲ್ಲಾ ಸುಳ್ಳು. ಪಕ್ಷ ಕಟ್ಟುವವರು ನನ್ನ ಜತೆ ಬರಬಹುದು ಎಂದು ಹೇಳಿದರು.
ಮುಂದಿನ ಐದು ವರ್ಷ, 5 ಕಾರ್ಯಕ್ರಮವನ್ನು ಘೋಷಣೆ ಮಾಡಲು ತೀರ್ಮಾನಿಸಲಾಗಿದೆ. ಈಗಲೇ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದಿಲ್ಲ. 2023ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಘೋಷಣೆ ಮಾಡಲಾಗುವುದು. ಈಗಲೇ ಘೋಷಿಸಿದರೆ ಬೇರೆ ಪಕ್ಷದವರು ಅವುಗಳನ್ನು ಹೈಜಾಕ್ ಮಾಡಲಿದ್ದಾರೆಂದು ಅವರು ತಿಳಿಸಿದರು.
‘ರಾಜ್ಯದ ಪ್ರತಿ ತಾಲೂಕಿನಲ್ಲಿಯೂ 15 ಸಾವಿರದಿಂದ 20 ಸಾವಿರ ಮಂದಿಕಾರ್ಯಕರ್ತರ ಸದಸ್ಯತ್ವದ ಮಾಡುವ ಮೂಲಕ ಹೊಸ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು. ಸಂಕ್ರಾಂತಿಯ ನಂತರ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಲಾಗುವುದು. ಕೇವಲ ಪ್ರಧಾನ ಕಾರ್ಯದರ್ಶಿಗಳನ್ನು ಮಾಡಿದರೆ ಉಪಯೋಗವಿಲ್ಲ. ಪಕ್ಷದ ಇಡೀ ವ್ಯವಸ್ಥೆಯನ್ನು ಬದಲಾಯಿಸಲಾಗುವುದು'
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ







