ಜೆಡಿಎಸ್ ಪಕ್ಷ ತೊರೆಯುವ ಯಾವುದೇ ಆಲೋಚನೆಯನ್ನು ಮಾಡಿಲ್ಲ: ಗುಬ್ಬಿ ಶಾಸಕ ಶ್ರೀನಿವಾಸ್

ಬೆಂಗಳೂರು, ಜ. 7: ‘ನನ್ನನ್ನು ಯಾವ ನಾಯಕರೂ ಬೆಳೆಸಿಲ್ಲ, ನನ್ನ ಅಪ್ಪ ನನ್ನನ್ನು ಬೆಳೆಸಿದ್ದಾರೆ. ಜೆಡಿಎಸ್ ಪಕ್ಷವನ್ನು ಬಿಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ, ಬಹಿರಂಗವಾಗಿ ಪಕ್ಷದ ನಾಯಕರ ವಿರುದ್ಧವೂ ಮಾತನಾಡಿಲ್ಲ. ಆದರೂ, ದೇವೇಗೌಡರನ್ನು ಸೋಲಿಸಿದರು ಎಂದು ಹೇಳುತ್ತಾರೆ. ಆತ್ಮಸಾಕ್ಷಿ ಇದ್ದವರಿಗೆ ಬೇಸರವಾಗುತ್ತದೆ' ಎಂದು ಮಾಜಿ ಸಚಿವ ಹಾಗೂ ಗುಬ್ಬಿ ಕ್ಷೇತ್ರದ ಹಾಲಿ ಶಾಸಕ ಶ್ರೀನಿವಾಸ್ ಮುಖಂಡರ ವಿರುದ್ಧವೇ ಪರೋಕ್ಷ ಟೀಕೆ ಮಾಡಿದ್ದಾರೆ.
ಗುರುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಇದುವರೆಗೂ ನನ್ನ ಸ್ವಾಭಿಮಾನಕ್ಕೆ ಯಾವುದೇ ರೀತಿಯಲ್ಲಿಯೂ ಧಕ್ಕೆಯಾಗಿಲ್ಲ. ಒಂದು ವೇಳೆ ಧಕ್ಕೆಯಾದರೆ ಸಹಿಸಲಾರೆ. ಯಾವ ಕಾಂಗ್ರೆಸ್ ಪಕ್ಷದ ಮುಖಂಡರ ಸಂಪರ್ಕದಲ್ಲೂ ನಾನು ಇಲ್ಲ ಎಂದು ಸ್ಪಷ್ಟಣೆ ನೀಡಿದರು.
ಪ್ರೀತಿಯಿಂದ ಹೇಳಿದರೆ ಎಲ್ಲರ ಮಾತು ಕೇಳುವೆ. ದಬ್ಬಾಳಿಕೆಯಿಂದ ಹೇಳಿದರೆ ನಾನು ಕೇಳುವುದಿಲ್ಲ. ನಮ್ಮಪ್ಪನೇ ನನಗೆ ದಬ್ಬಾಳಿಕೆಯಿಂದ ಹೇಳಿದರೆ ಕೇಳುವುದಿಲ್ಲ ಎಂದ ಅವರು, ಬ್ಯಾಂಕಿನಿಂದ ಸಾಲ ಕೊಡಿಸುವ ವಿಚಾರಕ್ಕಾಗಿ ನಾನು ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎನ್. ರಾಜಣ್ಣ ಅವರ ಮನೆಗೆ ಹೋಗಿದ್ದೆ. ಬೇರೆ ಯಾವುದೇ ವಿಚಾರವನ್ನೂ ಅಲ್ಲಿ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲವು ನಾಯಕರನ್ನು ನಾನೂ ಭೇಟಿ ಮಾಡಿದ್ದೆ. ಯಾರ ಮೇಲೂ ನನಗೆ ವೈಯಕ್ತಿಕವಾಗಿ ದ್ವೇಷ ಇಲ್ಲ, ಸತ್ಯ ಹೇಳುವುದೇ ದೊಡ್ಡ ಸಮಸ್ಯೆಯಾಗಿದೆ ಎಂದ ಅವರು, ನಾನು ಜೆಡಿಎಸ್ ಪಕ್ಷ ತೊರೆಯುವ ಯಾವುದೇ ಆಲೋಚನೆಯನ್ನು ಮಾಡಿಲ್ಲ ಎಂದು ಹೇಳಿದರು.
ಸ್ವಾರ್ಥಕ್ಕೆ ಪಕ್ಷ ಬಲಿ ಸರಿಯಲ್ಲ: ‘ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಸುಮ್ಮನಿರಿಸಿ, ಬಿಜೆಪಿ ಜತೆ ಸಖ್ಯ ಬೆಳೆಸುತ್ತೇವೆಂದು ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ ಹೇಳುವ ಅಗತ್ಯ ಇರಲಿಲ್ಲ. ಅವರು ಸಭಾಪತಿಯಾಗದಿದ್ದರೆ ದೇಶ ಮುಳುಗಿ ಹೋಗುತ್ತಾ? ಯಾರದ್ದೊ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿ ಕೊಡಬಾರದು'
-ಕೆ.ಎಂ.ಶಿವಲಿಂಗೇಗೌಡ, ಜೆಡಿಎಸ್ ಪಕ್ಷದ ಹಿರಿಯ ಮುಖಂಡ







