‘ಗೋಹತ್ಯೆ ನಿಷೇಧ ಕಾಯ್ದೆ'ಗೆ ನಿಯಮ ರೂಪಿಸಲು ಅಧಿಕಾರಿಗಳಿಗೆ ಸೂಚನೆ: ಸಚಿವ ಪ್ರಭು ಚೌಹಾಣ್

ದೇಸಿ ಹಸುಗಳ ಉತ್ಪನ್ನಗಳ ಬಳಕೆಗೆ ಆದ್ಯತೆ: ಸಚಿವ ಪ್ರಭು ಚೌಹಾಣ್
ಬೆಂಗಳೂರು, ಜ. 7: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು ಇದಕ್ಕೆ ಬೆನ್ನೆಲುಬಾಗಿ ನಿಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ, ಸಚಿವ ಸಂಪುಟದ ಎಲ್ಲ ಸಹೊದ್ಯೋಗಿಗಳಿಗೆ ಪಕ್ಷದ ವರಿಷ್ಠರಿಗೆ, ಬಿಜೆಪಿಯ ಎಲ್ಲ ಶಾಸಕರಿಗೆ, ಇಲಾಖೆಯ ಅಧಿಕಾರಿಗಳಿಗೆ ಹಾಗೂ ಗೋವು ಸಂರಕ್ಷಣೆಯಲ್ಲಿ ತೊಡಗಿದವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಸಚಿವ ಪ್ರಭು ಚೌಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಅಧ್ಯಾದೇಶ(ಸುಗ್ರೀವಾಜ್ಞೆ) ಹೊರಡಿಸಿದ್ದು, ಅದಕ್ಕೆ ಸಂಬಂಧಪಟ್ಟ ನಿಯಮಗಳನ್ನು ರಚಿಸುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಕಸಾಯಿಖಾನೆಗೆ ಒಯ್ಯುವಾಗ ರಕ್ಷಿಸಲಾದ ಗೋವುಗಳನ್ನು ಸಾಕಲು ಸಾರ್ವಜನಿಕರು ಮುಂದೆ ಬಂದರೆ ಅವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಆರ್ಥಿಕವಾಗಿ ಸಬಲರು, ಆಸಕ್ತರು ಗೋವನ್ನು ಮನೆಯಲ್ಲಿ ಸಾಕಿದರೆ ಸಂರಕ್ಷಣೆಗೆ ಮತ್ತಷ್ಟು ಬಲ ದೊರೆತಂತಾಗುತ್ತದೆ. ಗೋವಿನ ಬಗ್ಗೆ ಸಮಾಜದಲ್ಲಿರುವ ಪ್ರೀತಿ, ಶ್ರದ್ಧೆ ಮತ್ತು ಸಂರಕ್ಷಣಾ ಮನೋಭಾವ ದೇಸಿ ಗೋವುಗಳ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಧಿಕಾರಿಗಳಿಗೆ ಸೂಚನೆ: ಕಳ್ಳ ಸಾಗಣೆ ಮತ್ತು ವಧೆ ತಡೆದು ವಶಪಡಿಸಿಕೊಂಡ ಗೋವುಗಳನ್ನು ಗೋಶಾಲೆಗಳಿಗೆ ನೀಡಿ ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗೋಹತ್ಯೆ ನಿಷೇಧದ ನಂತರ ಗೋವುಗಳ ನಿರ್ವಹಣೆಗೆ ಅಂದಾಜು ತಗಲುವ ವೆಚ್ಚ ಮತ್ತು ವ್ಯವಸ್ಥೆಯ ಮಾಹಿತಿಯನ್ನು ಪಡೆದುಕೊಳ್ಳಲಾಗಿದ್ದು, ಸಿಎಂ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಗೋಶಾಲೆ ಮತ್ತು ಗೋವುಗಳ ನಿರ್ವಹಣೆಯ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ದೇಸಿ ಹಸುಗಳ ಉತ್ಪನ್ನಗಳ ಬಳಕೆಗೆ ಆದ್ಯತೆ: ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನಲ್ಲದೆ ಗೋವುಗಳ ಸಗಣಿ ಮತ್ತು ಮೂತ್ರದಿಂದ ತಯಾರಾಗುತ್ತಿರುವ ಇತರೇ ಉತ್ಪನ್ನಗಳಾದ ಗೋಭಸ್ಮ, ಸೋಪು, ಶಾಂಪೂ, ಊದಿನಕಡ್ಡಿ, ಪಂಚಗವ್ಯ, ವರ್ಮಿಕಾಂಪೋಸ್ಟ್, ಗೋಅರ್ಕ, ಗೋನಾಯ್ಲ್, ಕೀಟನಾಶಕ ಇತ್ಯಾದಿಗಳನ್ನು ಸಾರ್ವಜನಿಕರು ಹೆಚ್ಚು ಹೆಚ್ಚು ಬಳಸುವುದರ ಮೂಲಕ ಗೋಸಂರಕ್ಷಣೆಗೆ ಸಹಕರಿಸಬೇಕು. ಇದಕ್ಕೆ ಸಂಬಂಧಪಟ್ಟಂತೆ ಅಧ್ಯಯನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ರಾಜ್ಯದಲ್ಲಿ ಗೋಹತ್ಯೆ ಪ್ರಕರಣ ಕಂಡುಬಂದಲ್ಲಿ ಆಯಾ ಪ್ರದೇಶದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದ ಅವರು, ರಾಜ್ಯದಲ್ಲಿ ಗೋಹತ್ಯೆ ತಡೆ ಮತ್ತು ಜಾನುವಾರುಗಳ ಸಂರಕ್ಷಣೆಗೆ ಎಲ್ಲ ಸಹಕಾರ ಅಗತ್ಯ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.







