ಮನೆಗೆ ನುಗ್ಗಿ ಮದ್ಯ ಸೇವಿಸಿ ಸಿಕ್ಕಿ ಬಿದ್ದ ಯುವಕ ತಂದೆಯನ್ನೇ ಹತ್ಯೆ ಮಾಡಿದ್ದು ಬಾಯ್ಬಿಟ್ಟ !

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.7: ಇಂದಿರಾನಗರದ ಮನೆಯೊಂದಕ್ಕೆ ನುಗ್ಗಿ ಮದ್ಯ ಸೇವಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಯುವಕನೊಬ್ಬ ವಿಚಾರಣೆ ವೇಳೆ ತಂದೆಯನ್ನೇ ಹತ್ಯೆ ಮಾಡಿದ್ದ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ.
ಬೆಳಗಾವಿ ಮೂಲದ ಆರೋಪಿ ರಘುವೀರ್ ಕುಮಾರ್ ಕಳೆದ 2019ರಲ್ಲಿ ಪಬ್ ಜೀ ಆಡಬೇಡ ಎಂದು ತಂದೆ ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶಗೊಂಡು ತನ್ನ ತಂದೆಯನ್ನು ಕೊಲೆ ಮಾಡಿರುವುದನ್ನು ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಡಿ.30ರಂದು ಇಂದಿರಾನಗರದ ಪಿಕಾಸ ಅಪಾರ್ಟ್ಮೆಂಟ್ನ ನಿವಾಸಿ ಅಭಯ್ಕುಮಾರ್ ಅವರು ಕುಟುಂಬ ಸಮೇತ ಗೋವಾಕ್ಕೆ ತೆರಳಿದ್ದು ಮನೆ ಬಿಡುವಾಗ ಫ್ಲ್ಯಾಟ್ನ ಬೀಗದ ಕೀಯನ್ನು ಸೆಕ್ಯೂರಿಟಿ ಗಾರ್ಡ್ ಗೆ ನೀಡಿ ಮನೆ ಕೆಲಸದಾತ ಅನಿಲ್ ಎಂಬಾತ ಬಂದರೆ ಆತನಿಗೆ ಕೀ ಕೊಡುವಂತೆ ಹೇಳಿದ್ದರು. ಇದನ್ನು ಹತ್ತಿರದಲ್ಲೇ ಇದ್ದು ಕೇಳಿಸಿಕೊಂಡ ಬಂಧಿತ ಆರೋಪಿ ರಘುವೀರ್, ಮರುದಿನ ಡಿ.31 ರಂದು ಅನಿಲ್ ಸೋಗಿನಲ್ಲಿ ಬಂದು ಸೆಕ್ಯೂರಿಟಿ ಗಾರ್ಡ್ ನಿಂದ ಫ್ಲ್ಯಾಟ್ ಕೀ ಪಡೆದು ಮನೆಗೆ ತೆರಳಿ ಮದ್ಯದ ಬಾಟಲಿಗಳನ್ನು ನೋಡಿ ಅದನ್ನು ಸೇವಿಸಿ ಒಂದು ದಿನ ಕಾಲಕಳೆದಿದ್ದಾನೆ ಎನ್ನಲಾಗಿದೆ.
ಜ.1 ರಂದು ಮನೆ ಕೆಲಸಗಾರ ಅನಿಲ್ ಅಪಾರ್ಟ್ಮೆಂಟ್ ಬಳಿ ಬಂದು ಸೆಕ್ಯೂರಿಟಿ ಗಾರ್ಡ್ ಗೆ ಕೀ ಕೊಡುವಂತೆ ಕೇಳಿದ್ದಾನೆ. ಈಗಾಗಲೇ ಅನಿಲ್ ಎಂಬಾತನಿಗೆ ಕೀ ನೀಡಿರುವುದಾಗಿ ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾನೆ. ಆತಂಕಗೊಂಡ ಆತ ಮನೆ ಮಾಲಕರಿಗೆ ಫೋನ್ ಮಾಡಿ ನಡೆದ ವಿಷಯವನ್ನೆಲ್ಲ ವಿವರಿಸಿದ್ದಾನೆ. ಕೂಡಲೇ ಸೆಕ್ಯೂರಿಟಿ ಗಾರ್ಡ್ ಗೆ ಮನೆ ಬಳಿ ತೆರಳುವಂತೆ ಮನೆಯವರು ಕರೆ ಮಾಡಿ ತಿಳಿಸಿದ್ದು ಮನೆಗೆ ಹೋಗಿ ನೋಡಿದಾಗ ರಘುವೀರ್ ಮದ್ಯ ಸೇವಿಸಿ ಮಲಗಿರುವುದು ಕಂಡುಬಂದಿದ್ದು ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ 2019ರಲ್ಲಿ ಬೆಳಗಾವಿಯಲ್ಲಿ ತಾನು ತಂದೆಯನ್ನೇ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







