ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರಿಂದ ಟ್ರ್ಯಾಕ್ಟರ್ ರ‍್ಯಾಲಿ

ಹೊಸದಿಲ್ಲಿ, ಜ. 7: ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಾವಿರಾರು ರೈತರು ಗುರುವಾರ ಭಾರೀ ಪೊಲೀಸ್ ಬಿಗಿಭದ್ರತೆಯ ನಡುವೆಯೂ ಸಿಂಘು, ಟಿಕ್ರಿ, ಗಾಝಿಪುರ ಗಡಿ ಹಾಗೂ ಹರ್ಯಾಣದ ರೇವಾಸನ್‌ನಿಂದ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರು.
‘‘ಇದು ಕೇವಲ ಹರ್ಯಾಣ, ಪಂಜಾಬ್ ಹಾಗೂ ಉತ್ತರಪ್ರದೇಶದ ವಿವಿಧ ಭಾಗಗಳಿಂದ ಜನವರಿ 26ರಂದು ಹೊಸದಿಲ್ಲಿಗೆ ನಡೆಯಲಿರುವ ಪ್ರಸ್ತಾವಿತ ಟ್ರ್ಯಾಕ್ಟರ್ ರ‍್ಯಾಲಿಯ ಪೂರ್ವಾಭ್ಯಾಸ’’ ಎಂದು ಪ್ರತಿಭಟನೆ ನಡೆಸುತ್ತಿರುವ ರೈತರ ಒಕ್ಕೂಟ ತಿಳಿಸಿದೆ.
ಇಂದು ನಡೆದ ರ‍್ಯಾಲಿಯಲ್ಲಿ 3,500 ಟ್ರಾಕ್ಟರ್‌ಗಳು ಹಾಗೂ ಟ್ರಾಲಿಗಳೊಂದಿಗೆ ರೈತರು ಭಾಗವಹಿಸಿದ್ದಾರೆ ಎಂದು ಭಾರತಿ ಕಿಸಾನ್ ಒಕ್ಕೂಟ (ಏಕ್ತಾ ಉಗ್ರಾಹನ್)ದ ವರಿಷ್ಠ ಜೋಗಿಂದರ್ ಸಿಂಗ್ ಉಗ್ರಹಾನ್ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂದೆಗೆಯುವುದು ಹೊರತುಪಡಿಸಿ ಬೇರೆ ಯಾವುದನ್ನೂ ಒಪ್ಪಿಕೊಳ್ಳಲಾರೆವು ಎಂದು ಉಗ್ರಹಾನ್ ಹೇಳಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ರೈತ ಒಕ್ಕೂಟಗಳು ಹಾಗೂ ಕೇಂದ್ರ ಸರಕಾರದ ನಡುವೆ ಶುಕ್ರವಾರ 8ನೇ ಸುತ್ತಿನ ಮಾತುಕತೆ ನಡೆಯಲಿದೆ.
ರೈತರು ಗುರುವಾರ 11 ಗಂಟೆಗೆ ಟ್ರ್ಯಾಕ್ಟರ್ ರ‍್ಯಾಲಿ ಆರಂಭಿಸಿದರು. ದಿಲ್ಲಿ ಪೊಲೀಸರು ಹಾಗೂ ಹರ್ಯಾಣ, ಉತ್ತರಪ್ರದೇಶಗಳ ಪೊಲೀಸರ ಭಾರೀ ಬಿಗಿ ಭದ್ರತೆ ನಡುವೆ ರೈತರು ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್ ವೇಯತ್ತ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರು.
ಗಾಝಿಪುರದಲ್ಲಿ ಭಾರತೀಯ ಕಿಸಾನ್ ಒಕ್ಕೂಟದ ಹಿರಿಯ ನಾಯಕ ರಾಕೇಶ್ ಟಿಕಾಯತ್ ನೇತೃತದಲ್ಲಿ ನಡೆದ ಟ್ರ್ಯಾಕ್ಟರ್ ರ‍್ಯಾಲಿಯು ಪಲ್ವಾಲ್‌ಗೆ ಸಾಗಿತು.
‘‘ನಾವು ಮುಂದಿನ ದಿನಗಳಲ್ಲಿ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಿದ್ದೇವೆ. ಇಂದಿನ ರ‍್ಯಾಲಿಯಲ್ಲಿ ಹರ್ಯಾಣದಿಂದ 2,500 ಟ್ರ್ಯಾಕ್ಟರ್‌ಗಳು ಪಾಲ್ಗೊಂಡಿವೆ’’ ಎಂದು ಅವರು ತಿಳಿಸಿದ್ದಾರೆ.
‘‘ಕೇಂದ್ರ ಸರಕಾರ ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ, ರೈತರು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಿದ್ದಾರೆ ಎಂದು ನಾವು ಎಚ್ಚರಿಕೆ ನೀಡುತ್ತಿದ್ದೇವೆ’’ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ಸದಸ್ಯ ಅಭಿಮನ್ಯು ಕೊಹಾರ್ ಹೇಳಿದ್ದಾರೆ.







