ಮೀಸಲಾತಿಯ ಪಾಠ ಯಾರಿಂದಲೂ ಕಲಿಯುವ ಆವಶ್ಯಕತೆ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಕಡೂರು, ಜ.7: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂಬ ಕೂಗಿನ ವಿರೋಧಿ ನಾನಲ್ಲ. ಮನುಷ್ಯರ ನಡುವೆ ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾನತೆ ಬಂದಾಗ ಮಾತ್ರ ಎಲ್ಲ ಸಮಾಜಗಳ ಉನ್ನತಿ ಸಾಧ್ಯ. ನಾನು ಯಾರಿಂದಲೂ ಪಾಠ ಕಲಿಯುವ ಅಗತ್ಯವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಾಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ಗುರುವಾರ ನಡೆದ ಕನಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಸಮಾನತೆ ಬಂದಾಗ ಮಾತ್ರ ಮನುಷ್ಯ ಸಮುದಾಯದ ಉನ್ನತಿ ಸಾಧ್ಯ. ಕನಕ ಜಂಯತಿ ಆಚರಣೆ ಕೇವಲ ಕುರುಬ ಸಮುದಾಯಕ್ಕೆ ಮೀಸಲಲ್ಲ. ಅವರ ಆಚಾರ ವಿಚಾರಗಳು ಜಾತಿ ವ್ಯವಸ್ಥೆ ಮೀರಿದ ಆದರ್ಶಗಳಾಗಿವೆ ಮತ್ತು ಇಂದಿನ ಯುವಪೀಳಿಗೆಗೆ ಮಾದರಿಯಾಗಿವೆ ಎಂದರು.
ನಾನು ಶೋಷಿತರ ಪರವಾಗಿ ನಿಂತ ಮುಖ್ಯಮಂತ್ರಿ. ರಾಜಕೀಯ ಮೀಸಲಾತಿ ತಂದು ಪ್ರತಿಯೊಬ್ಬರಿಗೂ ನ್ಯಾಯ ನೀಡುವ ಪ್ರಯತ್ನ ಮಾಡಿದ್ದೇನೆ. ಪ್ರಸಕ್ತ ಯಾರಿಂದಲೂ ಮೀಸಲಾತಿಯ ಪಾಠ ಕಲಿಯುವ ಆವಶ್ಯಕತೆಯಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಗೋವಿನ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಗಿರಾಕಿಗಳಿಂದ ಗೋಹತ್ಯೆ ನಿಷೇದದ ಬಗ್ಗೆ ತಿಳಿಯುವ ಅವಶ್ಯಕತೆಯಿಲ್ಲ. ಸಗಣಿ ತೆಗೆಯದ, ಗಂಜಲ ಎತ್ತದ ಗಿರಾಕಿಗಳಿಂದ ಪಾಠವನ್ನೂ ಕಲಿಯಬೇಕಿಲ್ಲ. ಮುಖ್ಯಮಂತ್ರಿಯಾದಾಗ ಕುರಿ ಸತ್ತರೆ 5 ಸಾವಿರ ರೂ., ಹಸು ಹೆಮ್ಮೆ ಸತ್ತರೆ 10 ಸಾವಿರ ರೂ. ಪರಿಹಾರ ಕೊಡಲು ನಿರ್ಣಯ ಮಾಡಿದ್ದೆ. ಆದರೆ ಇಂದಿನ ಬಿಜೆಪಿ ಸರಕಾರ ಜನಪರ ಯೋಜನೆಯನ್ನು ನಿಲ್ಲಿಸಿದೆ. ಇಂತವರು ಗೋಹತ್ಯೆ ಬಗ್ಗೆ ಮಾತನಾಡುವುದು ಎಷ್ಠು ಸರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಕೆ.ಆರ್.ನಗರದ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಬಿ ವಿ ನಗರದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಯಾದವ ಗುರುಪೀಠದ ಕೃಷ್ಣಯಾದವಾನಂದ ಸ್ವಾಮೀಜಿ, ಚಿತ್ರದುರ್ಗದ ಬಂಜಾರ ಗುರುಪೀಠದ ಸರದಾರ್ ಸೇವಾಲಾಲ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಭೋಗನಂಜುಂಡೇಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಚ್.ಸಿ. ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಕೆ.ಎಸ್. ಆನಂದ್, ಭಕ್ತ ಕನಕದಾಸರ ಭಾವಚಿತ್ರ ಅನಾವರಣಗೊಳಿಸಿದರು.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಹೆಬ್ಬಾಳ ಶಾಸಕ ಬೈರತಿ ಸುರೇಶ್, ಹೊಸದುರ್ಗ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ತರೀಕೆರೆ ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್, ಟಿ.ಎಚ್. ಶಿವಶಂಕರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್, ಜಿಪಂ ಸದಸ್ಯೆ ವನಮಾಲಾ ದೇವರಾಜ್, ರೇಣುಕಾ ನಟರಾಜ್, ಮಹಿಳಾ ಕಾಂಗ್ರೆಸ್‍ನ ರೇಖಾಹುಲಿಯಪ್ಪ ಗೌಡ, ಜಿಪಂ ಮಾಜಿ ಅಧ್ಯಕ್ಷ ಎಸ್.ತಿಪ್ಪೇರುದ್ರಯ್ಯ, ಜಿಪಂ ಮಾಜಿ ಸದಸ್ಯ ಎಂ.ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.







