ಮತಾಂತರ ಕಾಯ್ದೆ: ಆರೋಪಿಯ ವಿರುದ್ಧ ಯಾವುದೇ ಪುರಾವೆ ಇಲ್ಲ
ಹೈಕೋರ್ಟ್‌ಗೆ ತಿಳಿಸಿದ ಉತ್ತರಪ್ರದೇಶ ಸರಕಾರ

ಲಕ್ನೊ, ಜ. 7: ಉತ್ತರಪ್ರದೇಶದಲ್ಲಿ ಬಲವಂತದ ಮತಾಂತರದ ವಿರುದ್ಧ ಜಾರಿಗೆ ತರಲಾದ ನೂತನ ವಿವಾದಾತ್ಮಕ ಕಾಯ್ದೆ ಅಡಿ ದಾಖಲಿಸಲಾದ ಮೊದಲ ಪ್ರಕರಣದ ಆರೋಪಿಯಾಗಿರುವ ಮುಸ್ಲಿಂ ವ್ಯಕ್ತಿಯ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂದು ಆದಿತ್ಯನಾಥ್ ಸರಕಾರ ಗುರುವಾರ ಅಲಹಾಬಾದ್ ನ್ಯಾಯಾಲಯಕ್ಕೆ ತಿಳಿಸಿದೆ.
ಉತ್ತರಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ 2020 ನವೆಂಬರ್ 29ರಂದು ಪ್ರಮುಖ ಫಾರ್ಮಾಸ್ಯೂಟಿಕಲ್ ಕಂಪೆನಿಯಲ್ಲಿ ಕಾರ್ಮಿಕ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ಷಯ್ ಕುಮಾರ್ ತ್ಯಾಗಿ ಪಶ್ಚಿಮ ಉತ್ತರಪ್ರದೇಶದ ಮುಝಪ್ಫರ್‌ನಗರದಲ್ಲಿ 32 ವರ್ಷದ ನದೀಮ್ ಹಾಗೂ ಅವರ ಸಹೋದರ ಸಲ್ಮಾನ್ ವಿರುದ್ಧ ಮತಾಂತರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಾರ್ಮಿಕಾಗಿರುವ ನದೀಮ್ ಮುಝಪ್ಫರ್‌ನಗರದಲ್ಲಿರುವ ತನ್ನ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಬಳಿಕ ನನ್ನ ಪತ್ನಿ ಪಾರುಲ್‌ನನ್ನು ಪ್ರೇಮ ಜಾಲದಲ್ಲಿ ಸಿಲುಕಿಸಿದ್ದ ಹಾಗೂ ಆಕೆಯನ್ನು ಮತಾಂತರಿಸಿದ್ದ. ಆಕೆಯನ್ನು ಆಕರ್ಷಿಸಲು ನದೀಮ್ ಸ್ಮಾರ್ಟ್‌ಫೋನ್ ಉಡುಗೊರೆ ನೀಡಿದ್ದ. ಅಲ್ಲದೆ, ವಿವಾಹವಾಗುವುದಾಗಿ ಭರವಸೆ ನೀಡಿದ್ದ ಎಂದು ಅಕ್ಷಯ್ ಕುಮಾರ್ ಪ್ರಥಮ ಮಾಹಿತಿ ವರದಿಯಲ್ಲಿ ಆರೋಪಿಸಿದ್ದರು.
ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನದೀಮ್ ಸಲ್ಲಿಸಿದ್ದ ಮನವಿಯನ್ನು ಕಳೆದ ತಿಂಗಳು ವಿಚಾರಣೆಗೆ ಎತ್ತಿಕೊಂಡಿದ್ದ ಅಲಹಾಬಾದ್ ನ್ಯಾಯಾಲಯ, ನದೀಮ್ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಿರುವಂತೆ ಹಾಗೂ ಮುಂದಿನ ವಿಚಾರಣೆಯ ದಿನಾಂಕ (ಜನವರಿ 7)ದ ವರೆಗೆ ಬಂಧಿಸದಂತೆ ಪೊಲೀಸರಿಗೆ ಸೂಚಿಸಿತ್ತು.
ಇಂದು ನ್ಯಾಯಾಲಯ ನದೀಮ್‌ಗೆ ನೀಡಿರುವ ರಕ್ಷಣೆಯನ್ನು ಮುಂದುವರಿಸಿದೆ ಹಾಗೂ ಪ್ರಕರಣದ ವಿಚಾರಣೆಯನ್ನು ಜನವರಿ 15ಕ್ಕೆ ಮುಂದೂಡಿದೆ.







