ಅಧಿಕೃತ ರಾಜ್ಯಪತ್ರದಲ್ಲಿ ಸಿವಿಲ್ ಸೇವಾ ನಿಯಮಗಳು ಪ್ರಕಟ

ಬೆಂಗಳೂರು, ಜ.7: ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಗುರುವಾರ ಕರ್ನಾಟಕ ಸಿವಿಲ್ ಸೇವಾ(ನಡತೆ) ನಿಯಮಗಳು 1966ರನ್ನು ಮತ್ತಷ್ಟು ತಿದ್ದುಪಡಿ ಮಾಡಿ ಕಳೆದ ಸಾಲಿನ ಅ.27ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಪ್ರಕಟಿಸಿದ್ದ ನಿಯಮಗಳ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
ರಾಜ್ಯದ ಸರಕಾರಿ ನೌಕರ ಹಾಗೂ ಆತನಿಗೆ ಸಂಬಂಧಪಟ್ಟ ಕುಟುಂಬದ ಸದಸ್ಯರು ಒಳಗೊಳ್ಳುತ್ತಾರೆ. ಸರಕಾರಿ ನೌಕರನು, ಸರಕಾರವು ಪೋಷಿಸಿಕೊಂಡು ಬರುತ್ತಿರುವ ಕಂಪೆನಿಯಲ್ಲಿ ಅಥವಾ ಸಂಸ್ಥೆಯಲ್ಲಿ ತನ್ನ ಕುಟುಂಬದ ಯಾರೇ ಸದಸ್ಯನಿಗೆ ಉದ್ಯೋಗವನ್ನು ದೊರಕಿಸಿಕೊಡಲು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತನ್ನ ಸ್ಥಾನವನ್ನು ಅಥವಾ ಪ್ರಭಾವವನ್ನು ಬಳಸಿಕೊಳ್ಳಬಾರದು.
ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂತ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರಬಾರದು. ಅಲ್ಲದೆ, ಅವುಗಳೊಂದಿಗೆ ಅನ್ಯಥಾ ಸಂಬಂಧವನ್ನು ಹೊಂದಿರಬಾರದು, ಯಾವುದೇ ರಾಜಕೀಯ ಚಳವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ, ಅದರ ಸಹಾಯಾರ್ಥ ವಂತಿಗೆ ಹಾಗೂ ನೆರವು ನೀಡುವಂತಿಲ್ಲ.
ಕಾನೂನಿನ ಮೂಲಕ ಸ್ಥಾಪಿತವಾದ ಸರಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉರುಳಿಸುವಂಥದ್ದಾಗಿರುವ ಅಥವಾ ಉರುಳಿಸುವ ಉದ್ದೇಶ ಹೊಂದಿರುವ ಯಾವುದೇ ಚಳವಳಿಯಲ್ಲಿ, ಚಟುವಟಿಕೆಯಲ್ಲಿ ಸರಕಾರಿ ನೌಕರನ ಕುಟುಂಬದ ಯಾರೇ ಸದಸ್ಯರೂ ಭಾಗವಹಿಸದಂತೆ ತಡೆಗಟ್ಟಲು ಸಾಧ್ಯವಾಗದಿದ್ದರೆ, ಆ ವಿಷಯವನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ವರದಿ ಮಾಡಬೇಕು.
ಸರಕಾರಿ ನೌಕರನು ಸಂಸತ್ತು, ರಾಜ್ಯ ವಿಧಾನಮಂಡಲದ ಯಾವುದೇ ಸದನ ಅಥವಾ ಸ್ಥಳೀಯ ಪ್ರಾಧಿಕಾರದ ಚುನಾವಣೆಗಳಲ್ಲಿ ಪ್ರಚಾರ ಮಾಡುವಂತಿಲ್ಲ, ಹಸ್ತಕ್ಷೇಪ ಮಾಡುವಂತಿಲ್ಲ. ಅಲ್ಲದೆ ತನ್ನ ಪ್ರಭಾವವನ್ನು ಬೀರುವಂತಿಲ್ಲ. ಯಾವುದೇ ಕ್ರೀಡಾ ಸಂಘದ ಆಯ್ಕೆ ಹುದ್ದೆಗೆ ಸ್ಪರ್ಧಿಸುವಾಗ ಹಾಗೂ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸರಕಾರದಿಂದ ಹೊರಡಿಸಲಾಗುವ ಸೂಚನೆಗಳಿಗೆ ಬದ್ಧನಾಗಿರಬೇಕು.
ಸರಕಾರಿ ನೌಕರನು ರಜೆಯಲ್ಲಿರುವಾಗ ತುರ್ತು ಸಂದರ್ಭಗಳು ಅಥವಾ ತನ್ನ ಅಧಿಕೃತ ಕರ್ತವ್ಯಗಳ ನಿರ್ವಹಣೆಯ ಅಂಗವಾಗಿ, ರಜೆ ಮಂಜೂರು ಮಾಡಲು ಸಕ್ಷಮನಾದ ಕಚೇರಿ ಮುಖ್ಯಸ್ಥನಿಗೆ ತಿಳಿಸದೆ ಅಥವಾ ಅವರ ಅನುಮತಿ ಪಡೆಯದೆ ತನ್ನ ಕರ್ತವ್ಯ ಸ್ಥಳದ ಅಧಿಕಾರ ವ್ಯಾಪ್ತಿಯನ್ನು ಅಥವಾ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ಪೂರ್ವಾನುಮತಿಯನ್ನು ಪಡೆಯದೆ ಖಾಸಗಿ ವಿದೇಶ ಪ್ರವಾಸವನ್ನು ಕೈಗೊಳ್ಳುವಂತಿಲ್ಲ. ಅಂಥ ಖಾಸಗಿ ವಿದೇಶ ಪ್ರವಾಸಗಳ ಮಂಜೂರಾತಿಗೆ ಅನ್ವಯವಾಗುವ ನಿಯಮಗಳು ಹಾಗೂ ಸೂಚನೆಗಳ ಅನುಸಾರವೆ ಅಂತ ಕೋರಿಕೆಯನ್ನು ಪರಿಗಣಿಸತಕ್ಕದ್ದು.
ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯ, ದೇಶದ ಭದ್ರತೆಯ, ವಿದೇಶಿ ರಾಷ್ಟ್ರಗಳೊಂದಿಗಿನ ಸ್ನೇಹಯುತ ಸಂಬಂಧದ ಹಿತದೃಷ್ಟಿಗೆ, ಸಾರ್ವಜನಿಕ ಸುವ್ಯವಸ್ಥೆಗೆ, ಸಭ್ಯತೆಗೆ ಅಥವಾ ನೈತಿಕತೆಗೆ ಧಕ್ಕೆಯುಂಟು ಮಾಡುವ ಅಥವಾ ನ್ಯಾಯಾಲಯ ನಿಂದನೆಗೆ, ಮಾನಹಾನಿಗೆ ಅಥವಾ ಅಪರಾಧಕ್ಕೆ ಪ್ರಚೋದನೆ ನೀಡುವುದನ್ನು ಒಳಗೊಂಡಿರುವ ಯಾವುದೇ ಪ್ರದರ್ಶನದಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತಿಲ್ಲ ಅಥವಾ ಭಾಗವಹಿಸುವಂತಿಲ್ಲ.
‘ಮುಷ್ಕರ’ ಎಂದರೆ (ಕರ್ತವ್ಯದಿಂದ ಅನಧಿಕೃತ ಗೈರು ಹಾಜರಾಗುವುದೂ ಸೇರಿದಂತೆ) ಸರಕಾರಿ ನೌಕರರ ಒಂದು ಗುಂಪು ಒಟ್ಟಾಗಿ ಸೇರಿಕೊಂಡು ಕೆಲಸ ಮಾಡುವುದನ್ನು ನಿಲ್ಲಿಸುವುದು ಅಥವಾ ನಿಧಾನಗತಿಯಲ್ಲಿ ಕೆಲಸ ಮಾಡುವುದು ಅಥವಾ ಎಷ್ಟೇ ಸಂಖ್ಯೆಯ ಸರಕಾರಿ ನೌಕರರು ಒಟ್ಟಾಗಿ ಸೇರಿ ಅಥವಾ ತಮ್ಮ ತಮ್ಮಲ್ಲೆ ಮಾತನಾಡಿಕೊಂಡು ಕೆಲಸ ಮಾಡಲು ನಿರಾಕರಿಸುವುದು ಎಂದರ್ಥ.
ಸರಕಾರಿ ನೌಕರನು, ನಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆದ ಹೊರತು, ಯಾವುದೇ ವೃತ್ತ ಪತ್ರಿಕೆ ಅಥವಾ ಇತರ ನಿಯತಕಾಲಿಕ ಪ್ರಕಟಣೆಯ ಪೂರ್ಣ ಅಥವಾ ಭಾಗಶಃ ಒಡೆತನವನ್ನು ಹೊಂದಿರುವಂತಿಲ್ಲ, ಅವುಗಳ ಸಂಪಾದನಾ ಕಾರ್ಯ ಅಥವಾ ವ್ಯವಸ್ಥಾಪನಾ ಕಾರ್ಯ ಮಾಡುವಂತಿಲ್ಲ ಅಥವಾ ಅವುಗಳಲ್ಲಿ ಭಾಗವಹಿಸುವಂತಿಲ್ಲ.
ಆಕಾಶವಾಣಿ ಪ್ರಸಾರ, ಚಲನಚಿತ್ರ ಅಥವಾ ದೂರದರ್ಶನ, ಧಾರಾವಾಹಿಗಳಲ್ಲಿ ಭಾಗವಹಿಸುವಂತಿಲ್ಲ ಅಥವಾ ತನ್ನ ಹೆಸರಿನಲ್ಲಾಗಲಿ ಅಥವಾ ಅನಾಮಧೇಯವಾಗಿಯಾಗಲಿ ಅಥವಾ ಗುಪ್ತ ನಾಮದಿಂದಾಗಲೀ ಅಥವಾ ಬೇರೊಬ್ಬ ಹೆಸರಿನಲ್ಲಾಗಲೀ ಯಾವುದೇ ವೃತ್ತ ಪತ್ರಿಕೆ ಅಥವಾ ನಿಯತಕಾಲಿಕೆಗೆ ಲೇಖನ ಅಥವಾ ಪತ್ರ ಬರೆಯುವಂತಿಲ್ಲ.
ಕರ್ನಾಟಕ ಸರಕಾರದ ಅಥವಾ ಯಾವುದೇ ಇತರ ರಾಜ್ಯ ಸರಕಾರದ ಅಥವಾ ಕೇಂದ್ರ ಸರಕಾರದ ಕಾರ್ಯನೀತಿ ಅಥವಾ ಕ್ರಮವನ್ನು ಟೀಕಿಸುವಂತಿಲ್ಲ. ಪ್ರಾಧಿಕಾರದ ಪೂರ್ವ ಮಂಜೂರಾತಿ ಪಡೆಯದ ಹೊರತು, ಯಾವುದೇ ಬಗೆಯ ಉದ್ದೇಶಕ್ಕಾಗಿ ನಗದಾಗಿ ಅಥವಾ ವಸ್ತುಗಳ ರೂಪದಲ್ಲಿ ಯಾವುದೇ ನಿಧಿಗಳಿಗೆ ಅಥವಾ ಇತರೆ ಸಂಗ್ರಹಣೆಗಳಿಗೆ ವಂತಿಗೆಗಳನ್ನು ಕೇಳುವಂತಿಲ್ಲ, ಸ್ವೀಕರಿಸುವಂತಿಲ್ಲ. ಆದರೆ, ನೋಂದಾಯಿತ ಸೇವಾ ಸಂಘಗಳು ವಂತಿಗೆಯನ್ನು ಸಂಗ್ರಹಿಸಬಹುದು. ಆದರೆ, ಅದು ಐಚ್ಛಿಕವಾಗಿರಬೇಕು.
ಸರಕಾರಿ ನೌಕರನು ಯಾವುದೇ ಉಡುಗೊರೆಯನ್ನು ಸ್ವೀಕರಿಸುವಂತಿಲ್ಲ ಅಥವಾ ತನ್ನ ಕುಟುಂಬದ ಯಾರೇ ಸದಸ್ಯನು ಅಥವಾ ಅವನ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಇತರೆ ಯಾರೇ ವ್ಯಕ್ತಿಯು ಯಾವುದೇ ಉಡುಗೊರೆಯನ್ನು ಸ್ವೀಕರಿಸುವಂತಿಲ್ಲ. ತನ್ನ ಹತ್ತಿರದ ಸಂಬಂಧಿಗಳಿಂದ ಉಡುಗೊರೆಯನ್ನು ಸ್ವೀಕರಿಸಬಹುದು. ಆದರೆ, ಯಾವುದೇ ಅಂತ ಉಡುಗೊರೆಯ ಮೌಲ್ಯವು, ಸರಕಾರಿ ನೌಕರರ ಮಾಸಿಕ ಮೂಲ ವೇತನಕ್ಕಿಂತ ಹೆಚ್ಚಾಗಿದ್ದರೆ ಅವನು ಪ್ರಾಧಿಕಾರಕ್ಕೆ ವರದಿ ಮಾಡಬೇಕು.
ವಧು, ವರದಕ್ಷಿಣೆಯನ್ನು ಕೊಡುವಂತಿಲ್ಲ ಅಥವಾ ತೆಗೆದುಕೊಳ್ಳುವಂತಿಲ್ಲ ಅಥವಾ ಕೊಡಲು ಅಥವಾ ತೆಗೆದುಕೊಳ್ಳಲು ದುಷ್ಪ್ರೇರಿಸುವಂತಿಲ್ಲ. ಸರಕಾರದಿಂದ ಪೂರ್ವ ಮಂಜೂರಾತಿಯನ್ನು ಪಡೆಯದೆ ಯಾವುದೇ ಸರಕಾರಿ ನೌಕರನು ತನ್ನ ಗೌರವಾರ್ಥ ಅಥವಾ ಯಾರೇ ಇತರ ಸರಕಾರಿ ನೌಕರನ ಗೌರವಾರ್ಥ ಯಾವುದೇ ಗೌರವಪೂರ್ವಕ ಅಥವಾ ಸಮಾರೋಪ ಬಿನ್ನವತ್ತಳೆಯನ್ನು ಸ್ವೀಕರಿಸುವಂತಿಲ್ಲ. ಯಾವುದೇ ಪ್ರಶಸ್ತಿ ಪತ್ರಗಳನ್ನು ಸ್ವೀಕರಿಸುವಂತಿಲ್ಲ. ಯಾವುದೇ ಸಭೆಯಲ್ಲಿ ಅಥವಾ ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ.
ಪೂರ್ವಾನುಮತಿ ಪಡೆಯದೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಅಥವಾ ಯಾವುದೇ ಇತರೆ ಉದ್ಯೋಗಕ್ಕಾಗಿ ಮಾತುಕತೆ ನಡೆಸುವಂತಿಲ್ಲ. ಆದರೆ, ಸಾಮಾಜಿಕ, ಧರ್ಮಾರ್ಥ ಸ್ವರೂಪದ ಗೌರವಾರ್ಥ ಕೆಲಸಗಳನ್ನು ಅಥವಾ ಸಾಹಿತ್ಯ ಕಲಾತ್ಮಕ ಅಥವಾ ವೈಜ್ಞಾನಿಕ ಸ್ವರೂಪದ ಸಾಂದರ್ಭಿಕ ಕೆಲಸಗಳನ್ನು ಷರತ್ತುಗಳಿಗೊಳಪಟ್ಟು ಮಾಡಬಹುದು.
ಕಚೇರಿ ಕರ್ತವ್ಯಗಳಾಚೆಗೆ ಬಾಹ್ಯ ಖಾಸಗಿ ಕೆಲಸಗಳನ್ನು ನಿರ್ವಹಿಸುವುದರ ಮೇಲೆ ನಿರ್ಬಂಧ. ನಿಗದಿತ ಶುಲ್ಕ, ದರ, ಬಾಡಿಗೆ ಅಥವಾ ಪ್ರವೇಶ ಶುಲ್ಕವನ್ನು ಸಂದಾಯ ಮಾಡದೆ ಯಾವುದೇ ಸೇವೆಗಳನ್ನು ಬಳಕೆ ಮಾಡುವಂತಿಲ್ಲ. ಬಂಡವಾಳ ಹೂಡಿಕೆ, ಸಾಲ ನೀಡಿಕೆ ಅಥವಾ ಸಾಲ ತೆಗೆದುಕೊಳ್ಳುವಿಕೆಗೆ ಅವಕಾಶವಿಲ್ಲ.
ಪ್ರತಿಯೊಬ್ಬ ಸರಕಾರಿ ನೌಕರನು ಯಾವುದೇ ಸೇವೆಗೆ ಅಥವಾ ಹುದ್ದೆಗೆ ಮೊದಲು ನೇಮಕವಾಗುವಾಗ, ಆತನು ತನ್ನ ಸ್ವಂತ ಹೆಸರಿನಲ್ಲಾಗಲಿ, ಅಥವಾ ತನ್ನ ಕುಟುಂಬದ ಯಾರೆ ಸದಸ್ಯರ ಹೆಸರಿನಲ್ಲಾಗಲಿ ಅಥವಾ ಯಾವುದೇ ಇತರೆ ವ್ಯಕ್ತಿಯ ಹೆಸರಿನಲ್ಲಾಗಲಿ ಪಿತ್ರಾರ್ಜಿತವಾಗಿ ಬಂದ ಸ್ವಯಂ ಆರ್ಜಿಸಿದ ಅಥವಾ ಗುತ್ತಿಗೆ ಅಥವಾ ಅಡಮಾನದ ಮೇಲೆ ತಾನು ಹೊಂದಿರುವ ಸ್ಥಿರಾಸ್ತಿಯ ಸಂಪೂರ್ಣ ವಿವರಗಳನ್ನು ನೀಡಿ, ನಿಗದಿತ ನಮೂನೆಯಲ್ಲಿ ತನ್ನ ಚರ ಮತ್ತು ಸ್ಥಿರಾಸ್ತಿಗಳ ವಿವರ ಪಟ್ಟಿಯನ್ನು ಪೂರಕ ದಾಖಲೆಗಳೊಂದಿಗೆ ಮೂರು ತಿಂಗಳೊಳಗೆ ಸಲ್ಲಿಸಬೇಕು.
ಭಾರತದ ಹೊರಗೆ ಇರುವ ಸ್ಥಿರ ಸ್ವತ್ತನ್ನು ಆರ್ಜಿಸುವುದಕ್ಕೆ ಮತ್ತು ವೀಲೆ ಮಾಡುವುದಕ್ಕೆ ಮತ್ತು ವಿದೇಶಿಯರೊಂದಿಗೆ ವ್ಯವಹಾರಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಪ್ರಾಧಿಕಾರದ ಪೂರ್ವ ಮಂಜೂರಾತಿ ಪಡೆಯದೆ, ತನ್ನ ಅವಲಂಬಿತರನ್ನು ಹೊರತುಪಡಿಸಿ ಇತರ ಅಪ್ರಾಪ್ತ ವಯಸ್ಕನ ಅಥವಾ ಸ್ವತ್ತಿನ ಕಾನೂನುಬದ್ಧ ಪಾಲಕನಾಗಿ ಕಾರ್ಯನಿರ್ವಹಿಸುವಂತಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಚಂದ್ರಹಾಸ ಗಂ.ತಾಳೂಕರ ಅಧಿಸೂಚನೆ ಹೊರಡಿಸಿದ್ದಾರೆ.







