ಕೋವಿಡ್ ಜಾಗೃತಿ ಕಾಲರ್‌ಟ್ಯೂನ್‌ನಿಂದ ಅಮಿತಾಬ್ ಬಚ್ಚನ್ ಧ್ವನಿ ತೆಗೆಯುವಂತೆ ಹೈಕೋರ್ಟ್‌ನಲ್ಲಿ ಅರ್ಜಿ

ಹೊಸದಿಲ್ಲಿ, ಜ.7: ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕಾಲರ್‌ಟ್ಯೂನ್‌ನಿಂದ ಖ್ಯಾತ ನಟ ಅಮಿತಾಬ್ ಬಚ್ಚನ್ ಧ್ವನಿಯನ್ನು ತೆಗೆಯುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕೆಂದು ಕೋರಿ ದಿಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ.
ಅಮಿತಾಬ್ ಬಚ್ಚನ್ ಮತ್ತವರ ಕುಟುಂಬದ ಕೆಲ ಸದಸ್ಯರೇ ಕೊರೋನ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದ ಹಿನ್ನೆಲೆಯಲ್ಲಿ ಕಾಲರ್‌ಟ್ಯೂನ್‌ನಿಂದ ಅವರ ಧ್ವನಿಯನ್ನು ತೆಗೆಯುವುದು ಸೂಕ್ತ ಎಂದು ದಿಲ್ಲಿ ನಿವಾಸಿ, ಸಾಮಾಜಿಕ ಕಾರ್ಯಕರ್ತ ರಾಕೇಶ್ ಅರ್ಜಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೊರೋನ ಸೋಂಕಿನ ಸಮಯದಲ್ಲಿ ಹಲವು ಕೊರೋನ ಮುಂಚೂಣಿ ಕಾರ್ಯಕರ್ತರು ಜನರ ಅಗತ್ಯಗಳಿಗೆ ನೆರವಾಗುವ, ಅವರಿಗೆ ಆಹಾರ, ಬಟ್ಟೆಯ ಜೊತೆಗೆ ಆಶ್ರಯವನ್ನೂ ಒದಗಿಸಿದ್ದಾರೆ. ಕೊರೋನ ಜಾಗೃತಿ ಮೂಡಿಸುವ ಕಾಲರ್‌ಟ್ಯೂನ್‌ಗೆ ತಮ್ಮ ಧ್ವನಿಯನ್ನು ಉಚಿತವಾಗಿ ನೀಡುವವರೂ ಹಲವರಿದ್ದಾರೆ.
ಆದರೆ ಅಮಿತಾಬ್ ಬಚ್ಚನ್ ಸಮಾಜ ಸೇವೆ ನಡೆಸಿದ ದಾಖಲೆಯಿಲ್ಲ. ಅವರ ವಿರುದ್ಧ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಅಲ್ಲದೆ ಕೊರೋನ ಜಾಗೃತಿ ಕಾಲರ್‌ಟ್ಯೂನ್‌ಗೆ ಅವರು ಶುಲ್ಕವನ್ನೂ ಪಡೆಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಗುರುವಾರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಡಿಎನ್ ಪಟೇಲ್ ಹಾಗೂ ಜ್ಯೋತಿ ಸಿಂಗ್ ಅವರಿದ್ದ ನ್ಯಾಯಪೀಠ, ದೈಹಿಕ ವಿಚಾರಣೆಗೆ ಹಾಜರಾಗಲು ಅರ್ಜಿದಾರರ ಪರ ವಕೀಲರು ಅಸಮರ್ಥತೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜನವರಿ 18ಕ್ಕೆ ನಿಗದಿಗೊಳಿಸಿದೆ.







