ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ಗೆ ಕೊರೋನ ಕಾರ್ಮೋಡ

ಬ್ರಿಸ್ಬೇನ್ (ಆಸ್ಟ್ರೇಲಿಯಾ), ಜ.8: ಕ್ವೀನ್ಸ್‌ಲ್ಯಾಂಡ್ ಸರಕಾರ ಶುಕ್ರವಾರ ಸಂಜೆಯಿಂದ ಅನ್ವಯವಾಗುವಂತೆ ಕಠಿಣ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಬ್ರಿಸ್ಬೇನ್‌ನಲ್ಲಿ ನಿಗದಿಯಾಗಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುವ ಬಗ್ಗೆ ಸಂದೇಹ ಮೂಡಿದೆ.
ನಿರ್ಬಂಧಗಳು ಶುಕ್ರವಾರ ಸಂಜೆ 6ಕ್ಕೆ ಆರಂಭವಾಗಿ ಸೋಮವಾರ ಸಂಜೆ 6ಕ್ಕೆ ಮುಕ್ತಾಯವಾಗುತ್ತದೆ. ಬ್ರಿಸ್ಬೇನ್‌ನಲ್ಲಿ ಹೊಸ ಕೊರೋನ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹೇರಲಾಗಿದೆ. ಉಭಯ ತಂಡಗಳು ಮಂಗಳವಾರ ಬ್ರಿಸ್ಬೇನ್‌ಗೆ ಪ್ರಯಾಣ ಬೆಳೆಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಸಾಂಕ್ರಾಮಿಕ ಹರಡುವುದನ್ನು ತಡೆಯಲು ನಿರ್ಬಂಧಗಳನ್ನು ವಿಸ್ತರಿಸಲು ಸರಕಾರ ಹಿಂಜರಿಯುವುದಿಲ್ಲ ಎಂದು ಉನ್ನತ ಮೂಲಗಳು ಹೇಳಿರುವುದು ಪಂದ್ಯದ ಭವಿಷ್ಯ ತೂಗುಯ್ಯಾಲೆಯಾಗಲು ಕಾರಣವಾಗಿದೆ.
ಬ್ರಿಸ್ಬೇನ್ ಹೋಟೆಲ್‌ನ ಕ್ಲೀನರ್ ಒಬ್ಬರಲ್ಲಿ ರೂಪಾಂತರಿತ ಕೊರೋನ ವೈರಸ್ ಪತ್ತೆಯಾದ ಬೆನ್ನಲ್ಲೇ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
"ನಾವು ಕಠಿಣವಾಗಲಿದ್ದೇವೆ; ಸೋಂಕು ಹರಡುವಿಕೆ ತಡೆಯಲು ಕ್ಷಿಪ್ರವಾಗಿಯೇ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದು ಕ್ವೀನ್ಸ್‌ಲ್ಯಾಂಡ್ ಪ್ರಧಾನಿ ಅನ್ನಸ್ತಾಸಿಯಾ ಪಲಶೆಕ್ ಹೇಳಿದ್ದಾರೆ.
"ಇದು ನಂಬಲಸಾಧ್ಯವಾದಷ್ಟು ಗಂಭೀರ. ಗ್ರೇಟರ್ ಬ್ರಿಸ್ಬೇನ್ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಘೋಷಿಸುತ್ತಿದ್ದೇವೆ ಹಾಗೂ ಇದನ್ನು ನಿಯಂತ್ರಿಸುವವರೆಗೆ ನಮ್ಮ ಇತರ ಸರಹದ್ದಿನ ಸಹೋದ್ಯೋಗಿಗಳು ಕೂಡಾ ಗ್ರೇಟರ್ ಬ್ರಿಸ್ಬೇನ್ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಘೋಷಿಸಲು ಕೇಳಿಕೊಳ್ಳುತ್ತಿದ್ದೇನೆ" ಎಂದು ಅವರು ಹೇಳಿಕೆ ನೀಡಿದ್ದಾರೆ.
ಜನವರಿ 15ರಿಂದ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುವ ಸಾಧ್ಯತೆ ಬಗ್ಗೆ ಕೇಳಿದಾಗ, "ಇನ್ನೂ ಮಾತುಕತೆ ನಡೆದಿದೆ... ಈ ಹಂತದಲ್ಲಿ ಇನ್ನೂ ಧನಾತ್ಮಕ ಮಾತುಕತೆ ನಡೆಯುತ್ತಿದೆ" ಎಂದಷ್ಟೇ ಹೇಳಿದರು.
ಇನ್ನಷ್ಟು ಕಟ್ಟುನಿಟ್ಟಿನ ಕ್ವಾರಂಟೈನ್ ನಿಯಮಾವಳಿಗಳನ್ನು ಹೇರಿದರೆ ಬ್ರಿಸ್ಬೇನ್‌ಗೆ ಪ್ರಯಾಣಿಸದಿರಲು ಭಾರತೀಯ ತಂಡದ ವ್ಯವಸ್ಥಾಪಕರು ನಿರ್ಧರಿಸಿದ್ದಾರೆ ಎಂಬ ವರದಿಗಳು ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.







