ರೂಪಾಂತರಿ ಕೊರೋನ ವೈರಸ್ ಭೀತಿಯ ನಡುವೆ ಬ್ರಿಟನ್ ನಿಂದ ಭಾರತಕ್ಕೆ ಆಗಮಿಸಿದ ವಿಮಾನ

ಹೊಸದಿಲ್ಲಿ: ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೋನವೈರಸ್ ವೇಗವಾಗಿ ಹರಡುವ ಆತಂಕದ ಮಧ್ಯೆ ಬ್ರಿಟನ್‍ನಿಂದ ಏರ್ ಇಂಡಿಯಾ ವಿಮಾನವು 246 ಪ್ರಯಾಣಿಕರನ್ನು ಹೊತ್ತು ದಿಲ್ಲಿಗೆ ಇಂದು ಬಂದಿಳಿದಿದೆ.
ಹೊಸ ಹಾಗೂ ಹೆಚ್ಚು ಸಾಂಕ್ರಾಮಿಕ ವೈರಸ್ ಕಾಣಿಸಿಕೊಂಡ ಬೆನ್ನಿಗೆ ಕೇಂದ್ರ ಸರಕಾರವು ಡಿಸೆಂಬರ್ 23 ರಂದು ಬ್ರಿಟನ್‍ಗೆ ತೆರಳುವ ಹಾಗೂ ಅಲ್ಲಿಂದ ಬರುವ ವಿಮಾನಗಳನ್ನು ಡಿ.31ರ ತನಕ, ಆ ನಂತರ ಜ.6ರ ತನಕ ನಿರ್ಬಂಧಿಸಿತ್ತು. ಈಗಾಗಲೇ ಬ್ರಿಟನ್ ನಿಂದ ಬಂದವರಿಗೆ ಕಾಣಿಸಿಕೊಂಡಿರುವ ರೂಪಾಂತರಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ದೇಶದಲ್ಲಿ 73ಕ್ಕೇರಿದ ಹೊರತಾಗಿಯೂ ಬುಧವಾರದಿಂದ ಮತ್ತೆ ಭಾರತ-ಬ್ರಿಟನ್ ನಡುವಿನ ವಿಮಾನ ಹಾರಾಟ ಪುನರಾರಂಭವಾಗಿದೆ.
ಪ್ರತಿವಾರ 30 ವಿಮಾನಗಳು ಕಾರ್ಯಾಚರಿಸಲಿವೆ. ಭಾರತ ಹಾಗೂ ಬ್ರಿಟನ್ ನ ತಲಾ 15 ವಿಮಾನಗಳು ಕಾರ್ಯಾಚರಿಸಲಿವೆ. ಜನವರಿ 23ರ ತನಕ ವಿಮಾನ ಹಾರಾಟಕ್ಕೆ ಮಿತಿ ಇರಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಬ್ರಿಟನ್ ನಲ್ಲಿ ಕೋವಿಡ್ ಪರಿಸ್ಥಿತಿ ಗಂಭೀರವಾಗಿದೆ.ಹೀಗಾಗಿ ಬ್ರಿಟನ್‍ನಿಂದ ಬರುವ- ಅಲ್ಲಿಗೆ ಹೋಗುವ ವಿಮಾನಗಳಿಗೆ ಕನಿಷ್ಠ ಜನವರಿ 31ರ ತನಕ ನಿಷೇಧ ಮುಂದುವರಿಸಬೇಕೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಗುರುವಾರ ಕೇಂದ್ರ ಸರಕಾರವನ್ನು ವಿನಂತಿಸಿದ್ದರು.







