ಉತ್ತರ ಪ್ರದೇಶ ದೇವಳದಲ್ಲಿ ಮಹಿಳೆಯ ಸಾಮೂಹಿಕ ಅತ್ಯಾಚಾರ-ಹತ್ಯೆ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ

ಶಿವಮೊಗ್ಗ, ಜ.8: ಉತ್ತರ ಪ್ರದೇಶದಲ್ಲಿ ದೇವಳವೊಂದರಲ್ಲಿ ಐವತ್ತರ ಹರೆಯದ ಮಹಿಳೆಯ ಸಾಮೂಹಿಕ ಅತ್ಯಾಚಾರ-ಹತ್ಯೆ ಕೃತ್ಯವನ್ನು ಖಂಡಿಸಿ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಶಿವಮೊಗ್ಗದ ಪ್ರಗತಿಪರ ಸಂಘಟನೆಗಳು ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ದೇವಾಲಯವೊಂದರ ಅರ್ಚಕನ ಪೈಶಾಚಿಕ ಕೃತ್ಯ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಈ ಅತ್ಯಾಚಾರ ಕ್ರೌರ್ಯ ದಿಲ್ಲಿಯ ನಿರ್ಭಯಾ ಪ್ರಕರಣದ ರೀತಿಯಲ್ಲಿರುವುದು ದುರಂತ ಎಂದು ಪ್ರತಿಭಟನಾನಿತರತರು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ಭಾರತಕ್ಕೆ ಅತ್ಯಾಚಾರದ ಮತ್ತು ಆರೋಪಿಗಳನ್ನು ರಕ್ಷಿಸುವ ಕೆಟ್ಟ ಮಾದರಿಯನ್ನು ಸೃಷ್ಟಿಸುತ್ತಿರುವ ಉತ್ತರ ಪ್ರದೇಶದ ಸರಕಾರವನ್ನು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ವಜಾಗೊಳಿಸಬೇಕು.ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜನಶಕ್ತಿಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಸಾಕಷ್ಟು ಅತ್ಯಾಚಾರ ,ಕೊಲೆ, ಸುಲಿಗೆಗಳು ನಡೆಯುತ್ತಿದ್ದರೂ ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ ಸುಮ್ಮನಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉತ್ತರ ಪ್ರದೇಶ ಸರಕಾರವನ್ನು ವಜಾಗೊಳಿಸಬೇಕು. ಸಂತ್ರಸ್ತ ಮಹಿಳಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಪ್ರಗತಿಪರ ಸಂಘಟನೆಯ ಮುಖಂಡರಾದ ವಕೀಲರಾದ ಅನಿಲ್ ಕುಮಾರ್, ಶಿವಕುಮಾರ್ ಡಿ.ಎಸ್.ಆರ್.ಕುಮಾರ್, ಕೃಷ್ಣಮೂರ್ತಿ ಪುರದಾಳ್, ಅಜಿತ್, ಮಲ್ಲಿಕಾರ್ಜುನ್, ಕೆ.ರಾಘವೇಂದ್ರ, ಟಿ.ಎಚ್ ಹಾಲೇಶಪ್ಪ, ಡಿ.ಎಚ್.ರಾಮಚಂದ್ರಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.







