ತಮಿಳುನಾಡು: ದೇವಸ್ಥಾನದಲ್ಲಿ 40ರ ಹರೆಯದ ವಿಧವೆಯನ್ನು ಅತ್ಯಾಚಾರಗೈದ ದುಷ್ಕರ್ಮಿಗಳ ಬಂಧನ

ನಾಗಪಟ್ಟಿಣಂ: ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯಲ್ಲಿ ಗಣೇಶ ದೇವಸ್ಥಾನದಲ್ಲಿ ಇಬ್ಬರು ಸ್ಥಳೀಯ ಯುವಕರು ಬುಧವಾರ ರಾತ್ರಿ 40ರ ವಯಸ್ಸಿನ ವಿಧವೆ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ವರದಿಯಾಗಿದೆ.
ಶಂಕಿತ ಅತ್ಯಾಚಾರಿಗಳನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ ಹಾಗೂ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತರಿಬ್ಬರು ಮಹಿಳೆಗೆ ಪರಿಚಿತರಾಗಿದ್ದಾರೆ. ಇಬ್ಬರು ಸ್ಥಳೀಯರೇ ಆಗಿದ್ದಾರೆ. ಕೆಲವು ಸಮಯದಿಂದ ಮಹಿಳೆಗೆ ಕಿರುಕುಳ ನೀಡುತ್ತಿದ್ದರು. ರಾತ್ರಿ 9ರ ಸುಮಾರಿಗೆ ವೆಲಿಪಾಲಯಂನಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗುವ ಹಾದಿಯಲ್ಲಿ ಮಹಿಳೆಯನ್ನು ಅಪಹರಿಸಿದ್ದ ದುಷ್ಕರ್ಮಿಗಳು ದೇವಸ್ಥಾನಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಾಗಪಟ್ಟಿಣಂ ಪೊಲೀಸ್ ಅಧೀಕ್ಷಕ ಓಂ ಪ್ರಕಾಶ್ ಮೀನಾ The New Indian Express ಗೆ ತಿಳಿಸಿದ್ದಾರೆ.
ಶಂಕಿತರನ್ನು 25ರ ವಯಸ್ಸಿನ ಎಂ.ಅರುಣ್ ರಾಜ್ ಹಾಗೂ 24ರ ವಯಸ್ಸಿನ ಆನಂದ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಕೂಲಿ ಕಾರ್ಮಿಕರಾಗಿದ್ದರು.
ಮಹಿಳೆ ವೇದಾರಣ್ಯಂ ಸಮೀಪದ ಗ್ರಾಮದ ನಿವಾಸಿಯಾಗಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಗಜ ಚಂಡಮಾರುತದ ಬಳಿಕ ತನ್ನ ಇಬ್ಬರು ಪುತ್ರಿಯರೊಂದಿಗೆ ನಾಗಪಟ್ಟಿಣಂಗೆ ಬಂದಿದ್ದರು. ವೆಲಿಪಾಲಯಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ಕಟ್ಟಡ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದರು. ಯುವಕರು ಕಿರುಕುಳ ನೀಡಲು ಆರಂಭಿಸಿದ ಬಳಿಕ ತನ್ನ ಸಹೋದರಿಯ ಮನೆಯಲ್ಲಿ ನೆಲೆಸಲು ಆರಂಭಿಸಿದ್ದರು.







