ಜ.10ರಿಂದ 41ನೇ ರಂಗಭೂಮಿ ರಾಜ್ಯಮಟ್ಟದ ನಾಟಕ ಸ್ಪರ್ಧೆ
ಉಡುಪಿ, ಜ.8: ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ನಡೆಯುವ ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಗಳಲ್ಲಿ ಒಂದಾದ ರಂಗಭೂಮಿ ಉಡುಪಿ ಆಯೋಜಿಸುವ 41ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಕೊರೋನಾದ ಕಾರಣದಿಂದ ಇದೇ ಜ.10ರಿಂದ 16ರವರೆಗೆ ಎಂಜಿಎಂ ಕಾಲೇಜಿನ ಮುದ್ದಣ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಸುಮಾರು 15 ನಾಟಕಗಳನ್ನು ಆಯ್ಕೆ ಮಾಡುತಿದ್ದರೆ, ಈ ಬಾರಿ ರಾಜ್ಯದ ಕೇವಲ ಏಳು ತಂಡಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಎರಡು, ಉಡುಪಿ, ಕೋಲಾರ, ಕೊಪ್ಪಳ, ಮೈಸೂರು, ಧಾರವಾಡ ಹಾಗೂ ಕೋಲಾರಗಳ ತಲಾ ಒಂದು ತಂಡ ಈ ಬಾರಿ ನಾಟಕವನ್ನು ಪ್ರಸ್ತುತ ಪಡಿಸಲಿವೆ ಎಂದರು.
ಡಾ.ಟಿಎಂಎ ಪೈ, ಎಸ್.ಎಲ್.ನಾರಾಯಣ ಭಟ್ ಹಾಗೂ ಮಲ್ಪೆ ಮಧ್ವರಾಜ್ ಸ್ಮಾರಕ ನಡೆಯುವ ಈ ಸ್ಪರ್ಧೆಯ ಪ್ರಥಮ ಬಹುಮಾನ ವಿಜೇತ ತಂಡಕ್ಕೆ 35,000ರೂ., ದ್ಲಿತೀಯ 25,000ರೂ. ಹಾಗೂ ತೃತೀಯ 15,00ರೂ. ಅಲ್ಲದೇ ಶ್ರೇಷ್ಠ ನಿರ್ದೇಶನ, ನಟ, ನಟಿ, ಪ್ರಸಾದನ, ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ ಈ ಎಲ್ಲಾ ವಿಭಾಗಗಳಲ್ಲೂ ನಗದು ಸಹಿತ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದರು.
ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ಜ.10ರ ಸಂಜೆ 6 ಗಂಟೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ಎಸ್.ನಾಯ್ಕಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ರತ್ನಕುಮಾರ್ ಹಾಗೂ ಸುರೇಶ್ ಪಿ.ಎಸ್. ಭಾಗವಹಿಸುವರು ಎಂದರು.
ಪ್ರದರ್ಶನಗೊಳ್ಳುವ ನಾಟಕಗಳು: ಜ.10ಕ್ಕೆ ಕೋಲಾರದ ರಂಗ ವಿಜಯಾ ಮಾಲೂರು ಇವರಿಂದ ಅಸಂಗತ ನಾಟಕ ‘ತೊರೆದು ಜೀವಸಬಹುದೇ..’ ನಿರ್ದೇಶನ: ಮಹದೇವ ಹಡಪದ, 11ಕ್ಕೆ ಸಮುದಾಯ ಧಾರವಾಡದಿಂದ ಗಿರೀಶ್ ಕಾರ್ನಾಡರ ‘ತಲೆದಂಡ’ ನಿರ್ದೇಶನ: ಮಹದೇವ ಹಡಪದ, 12ರಂದು ಜಿಪಿಐಇಆರ್ ರಂಗತಂಡ ಮೈಸೂರು ಇವರಿಂದ ಜನಪದ ‘ಮಂಟೇಸ್ವಾಮಿ ಕಥಾ ಪ್ರಸಂಗ’ ನಿರ್ದೇಶನ: ಮೈಮ್ ರಮೇಶ್. ಜ.13ರಂದು ಸುಮನಸ ಕೊಡವೂರು ಉಡುಪಿ ಇವರಿಂದ ಲಿಂಗದೇವರು ಹಳೆಮನೆ ಇವರ ‘ನೆರಳಿಲ್ಲದ ಮನುಷ್ಯರು’ ನಿರ್ದೇಶನ: ಜೋಸೆಫ್, 14ಕ್ಕೆ ಶಿಕ್ಷಕರ ಕಲಾ ಸಂಘ ಕೊಪ್ಪಳ ಇವರಿಂದ ಐತಿಹಾಸಿಕ ‘ರಾವಿ ನದಿಯ ದಂಡೆಯಲ್ಲಿ’ ನಿರ್ದೇಶನ: ಲಕ್ಷ್ಮಣ ಪೀರಗಾರ, 15ಕ್ಕೆ ಸಮಷ್ಠಿ ಬೆಂಗಳೂರು ಇವರಿಂದ ವಿವೇಕ ಶಾನ್‌ಬಾಗ್‌ರ ‘ಕಂತು’ ನಿರ್ದೇಶನ: ಮಂಜುನಾಥ ಎಲ್. ಬಡಿಗೇರ, 16ಕ್ಕೆ ಅದ್ಯಮ ರಂಗ ಸಂಸ್ಕೃತಿ ಟ್ರಸ್ಟ್ ಬೆಂಗಳೂರು ಇವರಿಂದ ಐತಿಹಾಸಿಕ ‘ನಾನು ಚಂದ್ರಗುಪ್ತನೆಂಬ ವೌರ್ಯ’ ನಿರ್ದೇಶನ: ಮಾಲತೇಶ ಬಡಿಗೇರ.
ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷರಾದ ಎಂ.ನಂದಕುಮಾರ್, ಭಾಸ್ಕರ ರಾವ್ ಕಿದಿಯೂರು, ಜತೆ ಕಾರ್ಯದರ್ಶಿ ಮೇಟಿ ಮುದಿಯಪ್ಪ ಹಾಗೂ ಶ್ರೀಪಾದ ಹೆಗಡೆ ಉಪಸ್ಥಿತರಿದ್ದರು.







