'ಕಾನೂನು ವಾಪಸ್ ಪಡೆದರೆ ಮಾತ್ರ ನಾವು ಮನೆಗೆ ವಾಪಸ್ ಹೋಗುತ್ತೇವೆ'
8ನೇ ಸುತ್ತಿನ ಮಾತುಕತೆ ವೇಳೆ ಕೇಂದ್ರಕ್ಕೆ ರೈತರ ಸ್ಪಷ್ಟ ನುಡಿ

ಹೊಸದಿಲ್ಲಿ: ಸರಕಾರ ಹಾಗೂ ಪ್ರತಿಭಟನಾನಿರತ ರೈತರ ನಡುವೆ ಗುರುವಾರ ನಡೆದಿರುವ ಮಾತುಕತೆಯು ಗೊಂದಲವನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಿದೆ. ಕಾನೂನು ಕೇವಲ ಪಂಜಾಬ್ ಹಾಗೂ ಹರ್ಯಾಣಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅನ್ವಯಿಸುತ್ತದೆ ಎಂದು ಕೇಂದ್ರ ಸಚಿವರು ಸಭೆಯಲ್ಲಿ ಹೇಳಿದ್ದಾರೆ. ರಾಜ್ಯಗಳು ತಮ್ಮದೇ ಆದ ಶಾಸನವನ್ನು ತರಲಿ ಎಂದ ರೈತರು ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ.
"ಕಾನೂನುಗಳ ಕುರಿತು ಚರ್ಚೆ ನಡೆದಿದೆ. ಆದರೆ ಯಾವುದೆ ನಿರ್ಧಾರಕ್ಕೆ ಬರಲಾಗಿಲ್ಲ. ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದನ್ನು ಹೊರತುಪಡಿಸಿ ಬೇರೆ ಆಯ್ಕೆಯನ್ನು ರೈತ ಸಂಘಟನೆಗಳು ನೀಡಿದರೆ ಅದನ್ನು ನಾವು ಪರಿಗಣಿಸುತ್ತೇವೆ ಎಂದು ಸರಕಾರ ಹೇಳಿದೆ. ಯಾವುದೇ ಆಯ್ಕೆಯನ್ನು ನೀಡಲಾಗಿಲ್ಲ. ಹೀಗಾಗಿ ಸಭೆ ಮುಕ್ತಾಯವಾಗಿದೆ. ಮುಂದಿನ ಸಭೆಯನ್ನು ಜನವರಿ 15ಕ್ಕೆ ನಡೆಸಲಾಗುವುದು'' ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದೆ.
ಇದೇ ವೇಳೆ ಪ್ರತಿಭಟನಾನಿರತ ರೈತರು ಕೃಷಿ ಕಾಯ್ದೆಗಳ ಕುರಿತು ತಮ್ಮ ನಿಲುವನ್ನು ಕಠಿಣಗೊಳಿಸಿದ್ದಾರೆ.
“ನೀವು ಕಾನೂನುಗಳನ್ನು ವಾಪಸ್ ಪಡೆದರೆ ಮಾತ್ರ ನಾವು ಘರ್ ವಾಪಸಿ (ಮನೆಗೆ ವಾಪಸ್) ಆಗುತ್ತೇವೆ ಎಂದು ಓರ್ವ ರೈತ ನಾಯಕ ಗುರುವಾರ ನಡೆದಿದ್ದ ಸಭೆಯಲ್ಲಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ
ಕೇಂದ್ರ ಸರಕಾರವು ಕೃಷಿ ವಿಚಾರಕ್ಕೆ ಮಧ್ಯಪ್ರವೇಶಿಸಬಾರದು. ಹಲವು ಸುಪ್ರೀಂಕೋರ್ಟ್ ಆದೇಶಗಳು ಕೃಷಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿದೆ ಎಂದು ಹೇಳಿದ್ದಾಗಿ ಇನ್ನೋರ್ವ ರೈತ ಪ್ರತಿಪಾದಿಸಿದ್ದಾರೆ.
ನೀವು (ಸರಕಾರ)ಸಮಸ್ಯೆಯನ್ನು ಬಗೆಹರಿಸಲು ಬಯಸಿದಂತೆ ಕಾಣುತ್ತಿಲ್ಲ. ಮಾತುಕತೆಗಳು ಹಲವು ದಿನಗಳಿಂದ ನಡೆಯುತ್ತಿದೆ. ಈ ವಿಚಾರದಲ್ಲಿ ನಮಗೆ ಸ್ಪಷ್ಟ ಉತ್ತರ ನೀಡಿ. ನಾವು ಹೋಗುತ್ತೇವೆ. ಏಕೆ ಎಲ್ಲರ ಸಮಯವನ್ನು ಹಾಳು ಮಾಡುತ್ತೀರಿ ಎಂದು ರೈತ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.







