ವಿಪತ್ತು ನಿರ್ವಹಣಾ ಕಾಯ್ದೆ ಅನುಷ್ಠಾನದಲ್ಲಿ ಸರಕಾರ ವಿಫಲ: ಹೈಕೋರ್ಟ್ ಅಸಮಾಧಾನ

ಬೆಂಗಳೂರು, ಜ.8: ವಿಪತ್ತು ನಿರ್ವಹಣಾ ಕಾಯ್ದೆ-2005ರ ಅನುಷ್ಠಾನದ ವಿಚಾರದಲ್ಲಿ ಸರಕಾರದ ವೈಫಲ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಈ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಪತ್ರ ಸಲ್ಲಿಸಲು ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ.
ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ.ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸರಕಾರದ ಪರ ವಕೀಲರು, ಕಾಯ್ದೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತ ಲಿಖಿತ ಮಾಹಿತಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತು 2019ರಿಂದ ಇಲ್ಲಿವರೆಗೆ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ. ಆದರೆ, ಸರಕಾರದ ಕ್ರಮಗಳು ಮಾತ್ರ ನಿರಾಶಾದಾಯಕವಾಗಿವೆ. 16 ವರ್ಷಗಳ ಹಿಂದಿನ ವಿಪತ್ತು ನಿರ್ವಹಣಾ ಕಾಯ್ದೆ ಇಲ್ಲಿಯತನಕ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂಬುದೇ ದೊಡ್ಡ ವಿಪತ್ತು ಎಂದು ಬೇಸರ ವ್ಯಕ್ತಪಡಿಸಿತು.
ಅಲ್ಲದೇ, ಕಾಯ್ದೆಯ ಸೆಕ್ಷನ್-28ರ ಪ್ರಕಾರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚನೆಯಾಗಿ ಅಧಿಸೂಚನೆ ಹೊರಡಿಸಿದ ತಕ್ಷಣವೇ ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿಪತ್ತು ಸ್ಪಂದನಾ ನಿಧಿ ಹಾಗೂ ವಿಪತ್ತು ಉಪಶಮನ ನಿಧಿಗಳ ಸ್ಥಾಪನೆಯಾಗಬೇಕು. ಆದರೆ, ಈವರೆಗೆ ಈ ನಾಲ್ಕು ನಿಧಿಗಳ ಸ್ಥಾಪನೆಯಾಗಿಲ್ಲ. ಅವುಗಳೆಲ್ಲವೂ ಕಾಗದಗಳಲ್ಲಿ ಮಾತ್ರ ಅಸ್ತಿತ್ವದಲ್ಲಿವೆ. ಕಾಯ್ದೆಗೆ ಈವರೆಗೆ ನಿಯಮಗಳನ್ನೂ ರೂಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಹಾಗೆಯೇ, ಕಾಯ್ದೆಯ ಅನುಷ್ಠಾನ, ನಿಧಿಗಳ ಸ್ಥಾಪನೆ ಕುರಿತು ಮುಂದಿನ ಒಂದು ತಿಂಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ತಾಕೀತು ಮಾಡಿ, ವಿಚಾರಣೆಯನ್ನು ಜ.27ಕ್ಕೆ ಮುಂದೂಡಿತು.







