ವಿಧಾನಪರಿಷತ್‌ನಲ್ಲಿ ಗದ್ದಲ ಪ್ರಕರಣ: ಸದನ ಸಮಿತಿಗೆ ಬಿಜೆಪಿ ಸದಸ್ಯರ ರಾಜೀನಾಮೆ

ಬೆಂಗಳೂರು, ಜ. 8: ವಿಧಾನ ಪರಿಷತ್ ವಿಶೇಷ ಅಧಿವೇಶನದ ವೇಳೆ ನಡೆದಿದ್ದ 'ಗಲಾಟೆ' ಸಂಬಂಧ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ರಚಿಸಿದ್ದ ಸದನ ಸಮಿತಿಗೆ ಪರಿಷತ್ತಿನ ಸದಸ್ಯರಾದ ಬಿಜೆಪಿಯ ಎಚ್.ವಿಶ್ವನಾಥ್ ಮತ್ತು ಎಸ್.ವಿ.ಸಂಕನೂರ ಅವರು ದಿಢೀರ್ ರಾಜೀನಾಮೆ ನೀಡಿದ್ದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರು ನಿನ್ನೆಯಷ್ಟೆ ಪರಿಷತ್ತಿನ ಹಿರಿಯ ಸದಸ್ಯರಾದ ಮರಿತಿಬ್ಬೇಗೌಡ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸದನ ಸಮಿತಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಮರು ಪರಿಶೀಲನೆ ಕೋರಿ ಸಭಾಪತಿಗೆ ಪತ್ರವನ್ನು ಬರೆದ ಬೆನ್ನಲ್ಲೆ, ಇಬ್ಬರು ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ.
ಸದನ ಸಮಿತಿಯ ಮೊದಲ ಸಭೆಗೆ ಆಗಮಿಸಿದ್ದ ಎಚ್.ವಿಶ್ವನಾಥ್ ಮತ್ತು ಸಂಕನೂರು ಅವರು, ಸಭೆ ಆರಂಭವಾಗುತ್ತಿದ್ದಂತೆ ಇಬ್ಬರು ಸದಸ್ಯರು ತಾವು ಯಾವುದೇ ಕಾರಣಕ್ಕೂ ಈ ಸದನ ಸಮಿತಿಯಲ್ಲಿ ಮುಂದುವರೆಯುವುದಿಲ್ಲ. ನಮ್ಮ ರಾಜೀನಾಮೆಯನ್ನು ತೆಗೆದುಕೊಳ್ಳಿ ಎಂದು ಸಮಿತಿಯ ಅಧ್ಯಕ್ಷ ಮರಿತಿಬ್ಬೇಗೌಡ ಅವರಿಗೆ ಮನವಿ ಮಾಡಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ, ನೀವು ರಾಜೀನಾಮೆ ನೀಡಬೇಡಿ. ಮೊದಲು ಸಭೆಯಲ್ಲಿ ಕುಳಿತುಕೊಂಡು ಸಾವಧಾನವಾಗಿ ಮಾತನಾಡಿ, ಏನೇ ಸಮಸ್ಯೆಗಳಿದ್ದರೂ ಇತ್ಯರ್ಥ ಪಡಿಸಿಕೊಳ್ಳೋಣ ಎಂದು ಮನವಿ ಮಾಡಿದರೂ, ಇದನ್ನು ಕಿವಿಗೆ ಹಾಕಿಕೊಳ್ಳದೆ ಇಬ್ಬರು ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಬಳಿಕ ಮಾತನಾಡಿದ ಎಚ್.ವಿಶ್ವನಾಥ್, ಡಿ.15ರಂದು ವಿಧಾನಪರಿಷತ್‌ನಲ್ಲಿ ನಡೆದ ಗಲಾಟೆಯಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಅಂದು ನಡೆದ ಗಲಭೆಯಲ್ಲಿ ಸದನ ಸಮಿತಿ ಅಧ್ಯಕ್ಷರಾಗಿರುವ ಮರಿತಿಬ್ಬೇಗೌಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಇದರಿಂದ ನಿಷ್ಪಕ್ಷಪಾತವಾಗಿ ತನಿಖೆ ಸಾಧ್ಯವೇ ಎಂದು ಪ್ರಶ್ನಿಸಿದರು.







